ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹೆಚ್ಡಿಕೆ ವಾಗ್ಧಾಳಿ ನಡೆಸಿದ ಬೆನ್ನಲ್ಲೇ ಜೆಡಿಸ್ ನಾಯಕರನೇಕರು ಅದೇ ಹಾದಿ ಹಿಡಿದಿದ್ದಾರೆ.
ಮಂತ್ರಿ ಯೋಗೇಶ್ವರ್ ವಿರುದ್ಧ ಮೊಣಚು ಮಾತಿನಿಂದ ತಿವಿದಿರುವ ಮಾಜಿ ಶಾಸಕ ಶರವಣ ಕೂಡಾ ‘ಅವರೊಬ್ಬ ಬಚ್ಚಾ.. ಯೋಗೇಶ್ವರ್ ಕುರಿತ ಎಚ್ಡಿಕೆ ಅವರ ಮಾತು ಅಕ್ಷರಶಃ ನಿಜ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಶರವಣ, ಯೋಗೇಶ್ವರ್ ರಾಜಕೀಯ ಪ್ರಬುದ್ಧನಲ್ಲ. ಆವರನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿ ಬಂದಿದ್ದಾರೆ. ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತಾಡುತ್ತಾರೆ. ಅವರ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ ಎಂದು ಬಣ್ಣಿಸಿದ್ದಾರೆ.
ಯೋಗೇಶ್ವರ್ ತಾನೊಬ್ಬ ಸಾಚಾ ವ್ಯಕ್ತಿತ್ವದವನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ, ಮೆಗಾಸಿಟಿ ಹಗರಣದಲ್ಲಿನ ಅವರ ಪಾತ್ರ, ಅವರಿಂದ ನೊಂದವರು, ಆತ್ಮಹತ್ಯೆ ಮಾಡಿಕೊಂಡವರನ್ನು ಆತ ಮರೆಯುತ್ತಾರೆ. ವಂಚನೆ, ದಂಧೆ, ಜೂಜು ಎಂದರೆ ಕಣ್ಣೆದುರಿಗೆ ಬರುವುದೇ ಯೋಗೇಶ್ವರ. ಇಂಥವರು ಜನನಾಯಕನೊಬ್ಬನನ್ನು ಹೀಯಾಳಿಸುವುದು ಅಪಚಾರವೇ ಸರಿ ಎಂದು ಶರವಣ ಅಭಿಪ್ರಾಯಪಟ್ಟಿದ್ದಾರೆ.
ಯೋಗೇಶ್ವರ ಒಬ್ಬ ಸುಳ್ಳುಕೋರ. ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲು ಹೊರಟ ಆವರು, ತಾನು ಕುಮಾರಸ್ವಾಮಿ ಅವರನ್ನು ಅಡ್ಜೆಸ್ಟ್ ಮಾಡಿರುವುದಾಗಿ ಚುನಾವಣೆ ವೇಳೆ ಅಪಪ್ರಚಾರ ಮಾಡಿದ್ದರು. ಯೋಗೇಶ್ವರ್‌ರ ಮಾತಿನಿಂದಾಗಿ ಜೆಡಿಎಸ್ ಕಾರ್ಯಕರ್ತರು, ಎಚ್ಡಿಕೆ ಅವರಲ್ಲಿ ಉಂಟಾದ ಕೋಪದ ಬೆಂಕಿಗೆ ಅವರು ಸೋತದ್ದರು. ಅವರದ್ದೇ ಸುಳ್ಳು, ಅಬದ್ಧ ಮಾತುಗಳು ಅವರನ್ನು ಮುಗಿಸಿದವು ಎಂದು ಶರವಣ ವಿಶ್ಲೇಷಣೆ ಮಾಡಿದ್ದಾರೆ.