ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ವಿರುದ್ದ ಜೆಡಿಎಸ್ ನಾಯಕ, ಮಾಜಿ ಶಾಸಕ ಟಿ.ಎ.ಶರವಣ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಶರವಣ, ಯಾರನ್ನೋ ಓಲೈಕೆ ಮಾಡಲು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಏನೇನೋ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಆಗಲೇ ಅವರ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋ ರೀತಿಯಲ್ಲಿ ಮಾತಾಡ್ತಾ ಇದ್ದಾರೆ ಎಂದು ಜಮೀರ್ ನಡೆ ಬಗ್ಗೆ ವ್ಯಂಗ್ಯವಾಡಿದ ಶರವಣ, ಪಕ್ಷದಲ್ಲಿ ಇದ್ದಾಗ ಪಕ್ಷವೇ ನಮ್ಮ ತಾಯಿ ಅಂತಾ ಹಲವಾರು ಬಾರಿ ಹೇಳಿದ್ರಿ? ಈಗ ಎಲ್ಲಿ ಹೋಯಿತು ನಿಮ್ಮ ನಿಷ್ಟೆ? ಎಂದು ಪ್ರಶ್ನಿಸಿದರು.
ಇಸ್ಲಾಂನಲ್ಲಿ ಒಂದು ಮಾತಿದೆ. ಯಾರು ನಿಷ್ಟೆ, ಪ್ರಾಮಾಣಿಕತೆಯಿಂದ ಇರ್ತಾರೋ ಅದು ಅಲ್ಲಾಗೆ ಪೂಜೆ ಮಾಡಿದಂತೆ ಎಂದು ಜಮೀರ್ ಅವರನ್ನು ಕರಣಕಿದ ಶರವಣ, ‘ಅಪ್ಪನಾಣೆ ಸಿಎಂ ಆಗಲ್ಲ’ , ಅಂದವರೇ ಸಿಎಂ ಸ್ಥಾನದಲ್ಲಿ ಕೂರಿಸಿದ್ರಿ. ಈಗ ಮತ್ತೆ ಟೀಕೆ ಮಾಡಿಕೊಂಡು ತಿರುಗಾಡ್ತಾ ಇದೀರಿ. ಇದನ್ನು ಕೊನೆಮಾಡಬೇಕು. ಬಹಿರಂಗ ಕ್ಷಮೆ ಕೇಳಬೇಕು ಎಂದು ಜಮೀರ್ ಅಹ್ಮದ್‌ರನ್ನು ಒತ್ತಾಯಿಸಿದರು.
ನಮ್ಮ ನಾಯಕರು ಪಲ್ಟಿ ಹೊಡೀತಾರೆ ಅನ್ನುತ್ತಾರಲ್ಲ. ನೀವು ಪಲ್ಟಿ ಹೊಡೆದವರು. ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಪಲ್ಟಿ ಹೊಡೆದವರು ನೀವು. ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದು ನೀವು ಎಂದು ಜಮೀರ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ನಾವು ನಿಮ್ಮ ತಂಟೆಗೆ ಬರಲ್ಲ, ಆದರೆ ನಮ್ಮ ಪಕ್ಷದ ಬಗ್ಗೆ ಮಾತಾಡಬೇಡಿ ಎಂದೂ ಎಚ್ಚರಿಕೆ ನೀಡಿದರು.
ಮುಂದೆ ಯಾರಣ್ಣಾ..?
ನಿನ್ನೆ ಕುಮಾರಣ್ಣ, ಇಂದು ಸಿದ್ದರಾಮಣ್ಣ, ಮುಂದೆ ಯಾರಣ್ಣ.? ಎಂದು ಶರವಣ ಅವರು ಜಮೀರ್ ಅವರನ್ನು ಕೆಣಕಿದ ವಾಕ್ ವೈಖರಿಯೂ ಗಮನಸೆಳೆಯಿತು. ಜಮೀರ್ ಅಹ್ಮದ್ ಅವರು ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಕುಮಾರಣ್ಣ ಕುಮಾರಣ್ಣ ಅಂತಾ ಸುತ್ತಾಡ್ತಾ ಇದ್ರು, ಇಂದು ಸಿದ್ದರಾಮಣ್ಣ ಸಿದ್ದರಾಮಣ್ಣ ಅಂತಾ ಮಾತಾಡ್ತಾ ಇದ್ದಾರೆ. ಮುಂದೆ ಯಾರಣ್ಣ.? ಎಲ್ಲಿ ಪಲ್ಟಿ ಹೊಡೀತಾರೋ ನೋಡೋಣ ಎಂದವರು ಹೇಳಿದರು.