ಬೆಂಗಳೂರು: ಆರೆಸ್ಸೆಸ್ ಬಗ್ಗೆ ಮಾಜಿ ಮುಖ್ಯಮಂತ್ರಿ, ಕುಮಾರಸ್ವಾಮಿ ನೀಡಿರುವ ಹೇಳಿಕೆ ದೊಡ್ಡ ಪ್ರಮಾದ ಎನ್ನುವಂತೆ, ಬಿಜೆಪಿ ನಾಯಕರು ದಂಡೆತ್ತಿ ಯುದ್ಧಕ್ಕೆ ಬಂದವರಂತೆ ವರ್ತಿಸುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಸಾಕ್ಷಿ ಎಂದು ಜೆಡಿಎಸ್ ನಾಯಕ, ಮಾಜಿ ಶಾಸಕ ಟಿ. ಎ.ಶರವಣ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆ ಅಕ್ಷರಶಃ ಸತ್ಯವಾಗಿದೆ. ವ್ಯವಸ್ಥೆಯಲ್ಲಿ ಬಲಪಂಥೀಯ ಸಿದ್ದಾಂತವಾದಿಗಳನ್ನು ತೂರಿಸಲು ಆರೆಸ್ಸೆಸ್ ವ್ಯವಸ್ಥಿತ ತರಬೇತಿ, ಸವಲತ್ತು ಗಳನ್ನು ಕಲ್ಪಿಸಿ ಯುವಪಡೆಗಳನ್ನು ಹೇರಳವಾಗಿ ಸಜ್ಜು ಗೊಳಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಅವರು ವಿಶ್ಲೇಷಿಸಿದ್ದಾರೆ
ಜಾತೀಯತೆ, ಮೌಡ್ಯ, ಕೋಮು ಮನೋಭಾವ ತುಂಬಿಕೊಂಡ ಈ ಗುಂಪು ಆರೆಸ್ಸೆಸ್ ನ ಫ್ಯಾಕ್ಟರಿಯ ಉತ್ಪನ್ನಗಳು. ವ್ಯವಸ್ಥೆಯಲ್ಲಿ ಆಯಕಟ್ಟಿನ ಜಾಗ ಸೇರಿಕೊಂಡು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಜನ ಇವರು. ಇದು ಆರೆಸ್ಸೆಸ್ ಸೇರಿದಂತೆ, ಬಿಜೆಪಿಯ ಕೆಲವು ಮುಖವಾಣಿ ಸಂಸ್ಥೆಗಳು , ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ವಿಷ ಹಿಂಡಲು ನಡೆಸುವ ಪಿತೂರಿ ಎಂದು ಎಲ್ಲರಿಗೂ ತಿಳಿದಿರುವ ಸತ್ಯ. ಇದನ್ನೇ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನು ಎಂದು ಟಿ.ಎ.ಶರವಣ ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ಅವರು ಕೆಲವು ಮುಖ್ಯ ಪ್ರಶ್ನೆಗಳನ್ನ ಎತ್ತಿದ್ದು, ಅವುಗಳನ್ನು ಉತ್ತರಿಸದೆ ನಾಯಕರು ಬರೀ.. ಪಲಾಯನವಾಡದ ಹೇಳಿಕೆ ನೀಡುತ್ತಿರುವುದು ಈ ನಾಯಕರ ಜೊಳ್ಳು ತಿಳುವಳಿಕೆ, ಅಪ್ರಬುದ್ಧತೆಗೆ ಸಾಕ್ಷಿ ಎಂದು ಅವರು ಕಿಡಿಕಾರಿದ್ದಾರೆ.
ಲಂಚಾವತಾರದ ಆಗರವಾಗಿರುವ ಬಿಜೆಪಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಆರೆಸ್ಸೆಸ್ ತುಟಿ ಬಿಚ್ಚಿಲ್ಲ ಏಕೆ? ಈ ಬಗ್ಗೆ ಮಾತಾಡದ ಆರೆಸ್ಸೆಸ್ ನೈತಿಕ ಮೌಲ್ಯದ ಸಂಸ್ಥೆ ಹೇಗಾದೀತು? ಕುಟುಂಬ ರಾಜಕಾರಣದ ಬಗ್ಗೆ ಬೇರೆಯವರತ್ತ ಬೊಟ್ಟು ಮಾಡುವ ಬಿಜೆಪಿ ತನ್ನ ಒಡಲಲ್ಲೆ ದೊಡ್ಡ ಮಟ್ಟದ ಸ್ವಜನ ಪಕ್ಷಪಾತ, ಅಧಿಕಾರ ದಾಹ ಹೊಂದಿದ್ದು ಆರೆಸ್ಸೆಸ್ ಕಿಂಚಿತ್ತೂ ಮಾತಾಡುವುದಿಲ್ಲ. ಇದರ ಬಗ್ಗೆ ಬಿಜೆಪಿ ನಾಯಕರು ಏನೆನ್ನುತ್ತಾರೆ. ಇದಕ್ಕೆ ಉತ್ತರವಿಲ್ಲ ಏಕೆ? ಎಂದು ಕುಮಾರಸ್ವಾಮಿ ಕೇಳಿರುವ ಪ್ರಶ್ನೆಯನ್ನೇ..ಇನ್ನಷ್ಟು ತೀಕ್ಷ್ಣ ಶಬ್ದಗಳಲ್ಲಿ ಶರವಣ ಚಾಟಿ ಬೀಸಿದ್ದಾರೆ
ಆಪರೇಶನ್ ಕಮಲ ದೇಶದ ಪ್ರಜಾಸತ್ತೆಯ ಬುಡಕ್ಕೆ ಬೆಂಕಿ ಇತ್ತು ಜನಸಾಮಾನ್ಯರ ತೀರ್ಪನ್ನು ಕಿತ್ತೊಗೆಯುವ ಹೀನ ರಾಜಕೀಯ. ಅಂಥ ಕುಲಗೆಟ್ಟ ಪರಂಪರೆಗೆ ಬಿಜೆಪಿ ನಾಂದಿ ಹಾಡಿದ್ದು, ಇಂಥ ನೀಚ ರಾಜಕೀಯದ ಬಗ್ಗೆ ಕಿಂಚಿತ್ತೂ ಚಕಾರ ಎತ್ತದ ಆರೆಸ್ಸೆಸ್‌ನ ರಾಜಕೀಯ ಮೌಲ್ಯಗಳನ್ನು ಸಂವಿಧಾನ ವಿರೋಧಿ ಎಂದು ಕರೆದರೆ ತಪ್ಪೇನು? ಇಂಥ ಪ್ರಜಾ ವಿರೋಧಿ ತಂತ್ರಗಳಿಗೆ ಆರೆಸ್ಸೆಸ್ ಬೆಂಬಲವಿದೆಯೆ? ಈ ಬಗ್ಗೆ ಉತ್ತರಿಸಲಿ ಎಂದು ಶರವಣ ಪ್ರಶಿಸಿದ್ದಾರೆ .
ಜನಪರ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಯಾವ ಜನಪರ ವಿಚಾರಗಳನ್ನೂ ಮುಂದಿಟ್ಟುಕೊಂಡು ಹೋರಾಟ ಮಾಡಿದೆ ಎಂಬುದನ್ನು ನಾಯಕರು ಮೊದಲು ಹೇಳಲಿ. ಬಡವರ ಪರ, ರೈತರ ಪರ ಯಾವತ್ತೂ ದನಿ ಎತ್ತದ ಆರೆಸ್ಸೆಸ್ ಇದೀಗ ಗಗನಕ್ಕೆ ಏರಿರುವ ಅನಿಲ ದರ ದ ಬಗ್ಗೆ ನಿಲುವು ಸ್ಪಷ್ಟ ಪಡಿಸಲೀ. ತನ್ನ ಮಡಿವಂತಿಕೆ ಬಿಟ್ಟು ಹೋರಾಟದ ಅಖಾಡಕ್ಕೆ ಧುಮುಕಲಿ ಎಂದು ಟಿ. ಎ.ಶರವಣ ಸವಾಲು ಹಾಕಿದ್ದಾರೆ.
ಜಾತಿ ಧರ್ಮದ ಆಧಾರದ ಮೇಲೆ ಸಮಾಜ ಕದಡುವ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಜೀವ ವಿರೋಧಿ ಸಂಘಟನೆಗಳ ವಿರುದ್ಧ ಜೆಡಿಎಸ್ ತಲೆ ಎತ್ತಲಿದೆ. ಸಮಾನತೆ, ಸೋದರತೆ, ಸಹ ಭಾಗಿತ್ವ ಜೆಡಿಎಸ್ ನ ಮೂಲಮಂತ್ರ ವಾಗಿದ್ದು ಇದರಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಎಂದು ಟಿ.ಎ.ಶರವಣ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.