(ವರದಿ: ರವಿಕುಮಾರ್)
ದಾವಣಗೆರೆ: ಜಗಳೂರು ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿರುವ ಸಮೃದ್ದವಾಗಿ ಬೆಳೆದು ನಿಂತಿದ್ದ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಜನರಿಗೆ ವಾರವಾಗಿದ್ದ ಮರಗಳನ್ನು ಅನಾವಶ್ಯಕವಾಗಿ ತೆರವುಗೊಳಿಸಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಪರಿಸರ ಹೋರಾಟಗಾರ ಬಸವರಾಜ್ ದೂರಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ಸುಮಾರು ಹತ್ತಕ್ಕೂ ಅಧಿಕ ಮರಗಳಿದ್ದು ಇವುಗಳಿಂದ ಉತ್ತಮ ಗಾಳಿ ಮತ್ತು ನೆರಳು ದೊರೆಯುತ್ತಿತ್ತು. ಆಸ್ಪತ್ರೆಗೆ ಚಿಕಿತ್ಸೆಗೆ ಬರುವಂತಹ ರೈತರು ಮತ್ತು ರಾಸುಗಳು ಬಿಸಿಲಿನ ಜಳವನ್ನು ತಾಳಲಾರದೆ ನೆರಳಿನಲ್ಲಿ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿದ್ದರು ಎಂದವರು ಗಮನಸೆಳೆದಿದ್ದಾರೆ.

ಪಕ್ಕದಲ್ಲಿ ಪೊಲೀಸ್ ಠಾಣೆ ಇದ್ದು ಅಲ್ಲಿಗೆ ಭೇಟಿನೀಡುವ ಸಾರ್ವಜನಿಕರು ಬಿಸಿಲಿನ ತಾಪವನ್ನು ತಾಳಲಾರದೆ ಆಸ್ಪತ್ರೆಯ ಆವರಣದಲ್ಲಿರುವ ಮರಗಳತ್ತ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಕಟ್ಟಡ ನಿರ್ಮಾಣದ ನೆಪವಡ್ಡಿ ಬೇವು ,ಬತ್ತಿ ಸೇರಿದಂತೆ ನಾಲ್ಕೈದು ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಪಟ್ಟಣದ ಹಳೆ ಮಹಾತ್ಮ ಗಾಂಧಿ ವೃತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೆರಳೆಣಿಕೆಯಷ್ಟು ಮಾತ್ರ ಮರಗಳು ಇವೆ. ಇಂತಹಾ ಪರಿಸ್ಥಿತಿಯಲ್ಲಿ ಪರಿಸರ ಕಾಳಜಿಯನ್ನು ಮರೆತು ಮರಗಳನ್ನು ತೆರವು ಗೊಳಿಸಿರುವುದು ಸರಿಯಲ್ಲ ಎಂದು ಪರಿಸರ ಹೋರಾಟಗಾರರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾಕ್ಟರ್ ಲಿಂಗರಾಜ್, ಕಟ್ಟಡ ನಿರ್ಮಾಣ ಸಂಬಂಧ ಮರಗಳನ್ನು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆದೇ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮರಗಳನ್ನು ತೆರವುಗೊಳಿಸುವಂತೆ ಅನುಮತಿ ಕೇಳಿದ್ದರು. ಹಾಗಾಗಿ ಅನುಮತಿಯನ್ನು ನೀಡಲಾಗಿದೆ ಎಂದು ವಲಯ ಅರಣ್ಯ ಇಲಾಖೆಯ ಆರ್ ಎಫ್ಓ ನಿತಿನ್ ಬಲ್ಲವರ್ ತಿಳಿಸಿದ್ದಾರೆ.
ಆದರೆ, ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪೌಂಡ್ ಪಕ್ಕದಲ್ಲಿ ಇದ್ದಮರಗಳು ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿಲ್ಲ. ಆದರೂ ಅವಶ್ಯಕತೆ ಇಲ್ಲದಿದ್ದರೂ ಮರಗಳನ್ನು ತೆರವುಗೊಳಿಸಿರುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಚಾಂದ್ ಪೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.






















































