ಬೆಂಗಳೂರು: ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಶತ್ರುಗಳೂ ಸಮ್ಮಿತ್ರರಾಗಬಹುದು ಎಂಬುದಕ್ಕೆ ಜಗದೀಶ್ ಶೆಟ್ಟರ್ ನಡೆ ಮತ್ತೊಂದು ಉದಾಹರಣೆಯಾಗಿದೆ. ಈವರೆಗೂ ತಾನು ಧೂಷಿಸುತ್ತಿದ್ದ ಕಾಂಗ್ರೆಸ್ ಪಕ್ಷವನ್ನೇ ಅವರು ನೆಚ್ಚಿಕೊಂಡಿರುವುದು ಅಚ್ಚರಿಯ ಬೆಳವಣಿಗೆ.
ತಾನು ಈವರೆಗೂ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಬಿಜೆಪಿ ಪಕ್ಷ ಟಿಕೆಟ್ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಜಗದೀಶ್ ಶೆಟ್ಟರ್ ಅವರು ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಗೂ ಗುಡ್ ಬೈ ಹೇಳಿರುವ ಅವರು ಭಾನುವಾರ ತಮ್ಮ ಬೀಗರೂ ಆದ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ತಡರಾತ್ರಿವರೆಗೂ ಕೈ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಟಿಕೆಟ್ ಸಿಗದಿದ್ದರಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಸೇರ್ಪಡೆಯಾದ ರೀತಿಯಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರು ಕೂಡಾ ಕೈ ಗರಡಿ ತಲುಪಿದ್ದಾರೆ. ಬೆಳಿಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.