12ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಾಂಚನ್ನನಿಂದ ಲಿಂಗಾಯತರ ಹತ್ಯೆ, ಇದೀಗ 21 ನೇ ಶತಮಾನದಲ್ಲಿ ಸಿಎಂ ಸಿದ್ದರಾಮಯ್ಯ ರಿಂದ ಪಂಚಮಸಾಲಿಗಳ ಮೇಲೆ ಗುಂಡಾಗಿರಿ’; ಇದು ಅಂತ್ಯ ಅಲ್ಲ, ಆರಂಭ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಣಕಹಳೆ
ಬೆಳಗಾವಿ: ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿರುವುದನ್ನು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮ ಕ್ಷೇತ್ರ ದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಖಂಡಿಸಿದ್ದಾರೆ.
ಮೀಸಲಾತಿಯ ನ್ಯಾಯ ಕೇಳಲು ಹೋದ ಚನ್ನಮ್ಮನ ಮಕ್ಕಳಿಗೆ ನೋವು ಸಹಿತ ರಕ್ತದ ಉಡುಗೂರೆ ನೀಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಲಿಂಗಾಯತ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಜಯಮೃತ್ಯುಂಜಯ ಶ್ರೀ ಆಕ್ರೋಶ ಹೊರಹಾಕಿದ್ದಾರೆ.
ಮಂಗಳವಾರ ಬೆಳಗಾವಿ ಸುವರ್ಣ ಸೌಧ ಬಳಿ ಮೀಸಲಾತಿ ಹೋರಾಟಗಾರರ ಮೆನೆ ಅಮಾನುಷವಾಗಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದಿರುವ ಶ್ರೀಗಳು, ಅಂದು 12 ನೇ ಶತಮಾನದಲ್ಲಿ ಮಂತ್ರಿ ಕೊಂಡಿಮಾಂಚನ್ನ ಲಿಂಗಾಯತರ ಹತ್ಯೆಮಾಡಿಸಿದ್ದ, ಇದೀಗ 21 ನೇ ಶತಮಾನದಲ್ಲಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಲಾಠಿ ಚಾರ್ಜ್ ಮಾಡಿಸಿ ನಮ್ಮ ರಕ್ತ ಹರಿಸಿದ್ದಾರೆ ಎಂದು ಹೋಲಿಕೆ ಮಾಡಿದ್ದಾರೆ.
ಇದು ಅಂತ್ಯ ಅಲ್ಲ, ಆರಂಭ ಎಂದು ರಣಕಹಳೆ ಮೊಳಗಿಸಿರುವ ಸ್ವಾಮೀಜಿ, ಇದುವರೆಗೂ ನಾಲ್ಕು ವರ್ಷಗಳ ಕಾಲ ಲಿಂಗಾಯತ ಪಂಚಮಸಾಲಿಗಳು ಶಾಂತಿ ಚಳುವಳಿ ಮಾಡಿದ್ದೇವೆ. ಇನ್ನು ಮುಂದೆ ಕ್ರಾಂತಿ, ಚಳುವಳಿ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.