ಬೆಂಗಳೂರು: ಈ ವರ್ಷದ ಆರಂಭದಲ್ಲಿ ಆಪಲ್ ಬಿಡುಗಡೆ ಮಾಡಿದ ‘ಐಫೋನ್ ಏರ್’ ತನ್ನ ಅತೀ ತೆಳ್ಳಗೆ, ಹಗುರ ಮತ್ತು ಆಕರ್ಷಕ ವಿನ್ಯಾಸದಿಂದ ಸಾಕಷ್ಟು ಗಮನ ಸೆಳೆದಿತ್ತು. ಆದರೆ ಆರಂಭಿಕ ಕುತೂಹಲದ ಬಳಿಕ, ಅತಿಯಾಗಿ ತೆಳುವಾದ ವಿನ್ಯಾಸವೇ ಮಾರಾಟದ ವೇಗಕ್ಕೆ ಅಡ್ಡಿಯಾದುದಾಗಿ ವರದಿಗಳು ಸೂಚಿಸಿವೆ. ಇದೀಗ ಆ ಅನುಭವದಿಂದ ಪಾಠ ಕಲಿತಿರುವ ಆಪಲ್, ‘ಐಫೋನ್ ಏರ್ 2’ ಮೂಲಕ ತನ್ನ ತಂತ್ರವನ್ನು ಮರುಪರಿಶೀಲಿಸುತ್ತಿರುವ ಸೂಚನೆಗಳು ದೊರಕಿವೆ.
ಸೋರಿಕೆಗಳ ಪ್ರಕಾರ, ಐಫೋನ್ ಏರ್ 2 ಈಗಾಗಲೇ ಅಭಿವೃದ್ಧಿ ಹಂತದಲ್ಲಿದ್ದು, ಮೊದಲ ತಲೆಮಾರಿನಲ್ಲಿದ್ದ ಕೆಲವು ಕೊರತೆಗಳನ್ನು ಈ ಬಾರಿ ಸರಿಪಡಿಸಲು ಕಂಪನಿ ಮುಂದಾಗಿದೆ. ವಿಶೇಷವಾಗಿ ಕ್ಯಾಮೆರಾ ಮತ್ತು ಪ್ರಾಯೋಗಿಕ ಬಳಕೆಯ ದೃಷ್ಟಿಯಿಂದ ಮಹತ್ವದ ಸುಧಾರಣೆಗಳ ನಿರೀಕ್ಷೆಯಿದೆ.
ಐಫೋನ್ ಏರ್ 2 ಅನ್ನು 2026ರ ಸೆಪ್ಟೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಐಫೋನ್ 18 ಪ್ರೊ, ಐಫೋನ್ 18 ಪ್ರೊ ಮ್ಯಾಕ್ಸ್ ಹಾಗೂ ಬಹುಕಾಲದ ವದಂತಿಯ ಮಡಿಸಬಹುದಾದ ಐಫೋನ್ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಐಫೋನ್ ಏರ್ 2 ಬೆಲೆ ಸುಮಾರು ₹1,04,999ರಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
ಮೂಲ ಐಫೋನ್ ಏರ್ ಬಗ್ಗೆ ಕೇಳಿಬಂದ ಪ್ರಮುಖ ಟೀಕೆ ಅದರ ಸಿಂಗಲ್ ಕ್ಯಾಮೆರಾ ವ್ಯವಸ್ಥೆ. ಈ ಬಾರಿ ಆಪಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡುವ ಸಾಧ್ಯತೆ ಇದೆ. ಈಗಿರುವ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದ ಜೊತೆಗೆ ಎರಡನೇ ಸಂವೇದಕವನ್ನು ಸೇರಿಸಲಾಗುತ್ತದೆ ಎನ್ನಲಾಗಿದೆ. ಎರಡನೇ ಲೆನ್ಸ್ ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಇದರಿಂದ ಫೋನ್ ಹೆಚ್ಚು ಸಂಪೂರ್ಣ ಪ್ರೀಮಿಯಂ ಅನುಭವ ನೀಡಲಿದೆ ಎಂಬ ನಿರೀಕ್ಷೆ ಇದೆ. ಮುಂಭಾಗದಲ್ಲಿ 18 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮುಂದುವರಿಯಲಿದೆ.
ಐಫೋನ್ ಏರ್ ಸರಣಿಯ ಗುರುತಾಗಿರುವ ಸ್ಲಿಮ್, ಕ್ಲೀನ್ ಮತ್ತು ಮಿನಿಮಲ್ ವಿನ್ಯಾಸದಲ್ಲಿ ಅಷ್ಟೇನೂ ಬದಲಾವಣೆ ಸಾಧ್ಯತೆ ಕಡಿಮೆ. ನಿತ್ಯ ಬಳಕೆಗೆ ಹೆಚ್ಚು ಅನುಕೂಲವಾಗುವಂತೆ ಸಣ್ಣ ಪರಿಷ್ಕರಣೆಗಳನ್ನು ಮಾಡಬಹುದು ಎಂದು ಹೇಳಲಾಗುತ್ತಿದೆ.
ಐಫೋನ್ ಏರ್ 2 ಆಪಲ್‌ನ ಮುಂದಿನ ತಲೆಮಾರಿನ A20 ಪ್ರೊ ಚಿಪ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದರಲ್ಲಿ 6.5 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಇರಲಿದ್ದು, ಪ್ರೊಮೋಷನ್ ತಂತ್ರಜ್ಞಾನದೊಂದಿಗೆ 120Hz ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಗರಿಷ್ಠವಾಗಿ 3,000 ನಿಟ್‌ಗಳವರೆಗೆ ಹೊಳಪು ನೀಡುವ ಸಾಮರ್ಥ್ಯವೂ ಇರಬಹುದು ಎಂದು ವರದಿಗಳು ಹೇಳುತ್ತಿವೆ.



















































