ದೆಹಲಿ: ಕೋವಿಡ್-19 ಮಹಾಮಾರಿ ಮನುಕುಲಕ್ಕೆ ಸವಾಲಾಗಿರುವಾಗ ಯೋಗವು ನಮ್ಮ ಜೀವನದಲ್ಲಿ ಭರವಸೆಯ ಬೆಳಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏಳನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ಸಭೆ, ಸಮಾರಂಭಗಳು ನಡೆದಿಲ್ಲ. ಆದರೆ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
ಜಗತ್ತಿನಲ್ಲಿ ಕೋವಿಡ್ ಸೋಂಕು ಪರಿಚಯವಾದಾಗ ಯಾವುದೇ ದೇಶ ಸಿದ್ಧವಾಗಿರಿಲಿಲ್ಲ. ಆದರೆ ಈ ವೈರಸ್ ವಿರುದ್ಧ ನಾವು ಹೋರಾಡಬಹುದು ಎಂದು ಅರಿತುಕೊಳ್ಳಲು ಯೋಗವು ನಮಗೆ ಸಹಾಯ ಮಾಡಿತು ಎಂದು ಮೋದಿ ಯೋಗದ ಮಹತ್ವ ಕುರಿತು ಬೊಟ್ಟು ಮಾಡಿದರು.
Addressing the #YogaDay programme. https://t.co/tHrldDlX5c
— Narendra Modi (@narendramodi) June 21, 2021
ಯೋಗವು ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಸವಾಲಿನ ಕಾಲದಲ್ಲಿ ಒಬ್ಬರು ಹೇಗೆ ಬದುಕಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದ ಅವರು, ಈ ವರ್ಷದ ಧ್ಯೇಯವಾಕ್ಯ Yoga For Wellness ಎಂದು ಘೋಷಿಸಿದರು. ದೈಹಿಕ ಮತ್ತು ಮಾನಸಿಕ ಹಿತಕ್ಕಾಗಿ ಯೋಗವನ್ನು ಅಭ್ಯಾಸ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದವರು ಹೇಳಿದರು.
‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ. ಇತ್ತೀಚಿನ ಪರಿಸ್ಥಿತಿ, ಆರೋಗ್ಯದ ಸ್ಥಿತಿಗತಿಯಿಂದಾಗಿ ಹೆಚ್ಚೆಚ್ಚು ಮಂದಿ ಯೋಗ ಮಾಡುವಂತೆ ಜನರನ್ನು ಪ್ರೇರೇಪಿಸುತ್ತದೆ. ಪ್ರತಿ ದೇಶಗಳು, ಪ್ರತಿ ಪ್ರದೇಶಗಳು, ಜನರು ಆರೋಗ್ಯಯುತವಾಗಿ ಬಾಳಲಿ ಎಂದು ಮೋದಿ ಆಶಿಸಿದರು.
ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಯೋಗದತ್ತಲೂ ಗಮನಹರಿಸಿದೆ. ರೋಗಿಗಳ ಚಿಕಿತ್ಸೆಗೆ ಯೋಗವು ರಕ್ಷಾಕವಚವಾಗಿದೆ. ಕೊರೋನಾ ಚಿಕಿತ್ಸೆಯ ನಡುವೆಯೂ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಿದ್ದಾರೆ. ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂಬ ಸಂಗತಿಯತ್ತಲೂ ಪ್ರಧಾನಿ ಬೆಳಕು ಚೆಲ್ಲಿದರು.