ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಳೆದ ವರ್ಷದ ಬಜೆಟ್ ಅನುದಾನವೂ ಕೊಡಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಅನುದಾನದ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ಕಳೆದ ವರ್ಷ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತರಾಮನ್ ಅವರು ಅನೇಕ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಈ ಘೋಷಣೆಯಾಗಿ ಒಂದು ವರ್ಷವಾದರೂ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಅವರ ಘೋಷಣೆಯಿಂದಾಗಿ ಬೊಮ್ಮಾಯಿ ಅವರು ತಮ್ಮ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಿಸಿದ್ದರು. ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿರುವ ನಿರ್ಮಲಾ ಸೀತರಾಮನ್ ಅವರು ಕಳೆದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡಿದ್ದನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಬರ ಪ್ರದೇಶಗಳಿಗೆ ನೀರಿನ ವಿಚಾರವಾಗಿ ಅವರು ಮಾತನಾಡಿ ಬರ ಪೀಡಿತ ಕರ್ನಾಟಕದ ಮಧ್ಯ ಭಾಗದ ಪ್ರದೇಶದಲ್ಲಿ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿಯನ್ನು ನೀಡಲಿದೆ. ಆಮೂಲಕ ಸಣ್ಣ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದರು ಎಂದರು.
ಈ ಘೋಷಣೆಯನ್ನು ಯಾಕೆ ಜಾರಿಗೊಳಿಸಲಿಲ್ಲ ಇದು ಸರಳವಾದ ಪ್ರಶ್ನೆ. ರಾಜ್ಯದಿಂದ ಆಯ್ಕೆಯಾಗಿರುವ ನೀವು ಕರ್ನಾಟಕಕ್ಕೆ ನ್ಯಾಯ ಒದಗಿಸಿಲ್ಲ. ದಯಮಾಡಿ ನಮಗೆ ನ್ಯಾಯ ಒದಗಿಸಿ ಎಂದು ಡಿಕೆಶಿ ತಿಳಿಸಿದರು.
ಇದಕ್ಕೂ ಮುನ್ನ ಶಿವಕುಮಾರ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಬಿಜೆಪಿ ನಾಯಕರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ ಎಂದು ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುತ್ತಿದ್ದಾರೆ? 26 ಸಂಸದರು ಒಂದು ದಿನ ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತ ಕಾಪಾಡಲಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ನರೇಗಾ, ಕಳಸಾ ಬಂಡೂರಿ ವಿಚಾರದಲ್ಲೂ ಅನ್ಯಾಯ:
ಬರಪೀಡಿತ ಪ್ರದೇಶಗಳಲ್ಲಿ ನರೇಗಾ ಯೋಜನೆಯ 100 ಮಾನವಿ ದಿನದ ಕೂಲಿಯನ್ನು 150ಕ್ಕೆ ಹೇಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಈ ಕೆಲಸ ಮಾಡಿದೆಯೇ ಇಲ್ಲ. ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲ ಅನುಮತಿ ಸಿಕ್ಕಿದೆ ಎಂದು ಸಂಭ್ರಮಾಚರಣೆ ಕೂಡ ಮಾಡಿದರು. ನಾವು ಟೆಂಡರ್ ಕರೆದರೂ ಇದುವರೆಗೂ ಈ ಯೋಜನೆಗೆ ಅನುಮತಿ ನೀಡಿಲ್ಲ ಯಾಕೆ? ಹೀಗೆ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಈ ಹೋರಾಟ ನಮ್ಮ ಸ್ವಂತ ಹಿತಾಸಕ್ತಿಗಾಗಿ ಅಲ್ಲ. ನಮ್ಮ ರಾಜ್ಯದ ಜನರಿಗಾಗಿ. ಈಗ ನಾವು ಎಚ್ಛೆತ್ತುಕೊಳ್ಳದಿದ್ದರೆ ನಮಗೆ ಮುಂದಿನ ಹಣಕಾಸು ಆಯೋಗದಲ್ಲೂ ಅನ್ಯಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಈ ಹೋರಾಟ ಮಾಡಿದ್ದೇವೆ ಎಂದರು.







































































