ಬೆಂಗಳೂರು: ರಾಜಧಾನಿ ಬೆಂಗಳೂರು ಸುತ್ತ ಮತ್ತಲ ಒಂದು ನೂರು ಕಿಮೀ ವ್ಯಾಪ್ತಿಯ ಒಳಗಿನ ರೆಸಾರ್ಟ್ ಮತ್ತು ಅತಿಥಿ ತಂಗುದಾಣಗಳ ಭೂಮಿ ಒತ್ತುವರಿ ಕುರಿತು ಲ್ಯಾಂಡ್ ಆಡಿಟಿಂಗ್ ನಡೆಸಬೇಕೆಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ರಮೇಶ್ ಬಾಬು, ಇತ್ತೀಚಿನ ದಿನಗಳಲ್ಲಿ ಕಂದಾಯ ಭೂಮಿಯ ಬೆಲೆ ಏರಿಕೆಯನ್ನು ನಾವು ಮನಗಂಡಿರುತ್ತೇವೆ. ವಿಶೇಷವಾಗಿ ಬೆಂಗಳೂರು ಮತ್ತು ಸುತ್ತ ಮುತ್ತಲಿನ ಭೂಮಿಯ ಬೆಲೆಯು ಬಹಳಷ್ಟು ಏರಿಕೆಯಾಗಿದ್ದು, ಕೆಲವರು ವಾಣಿಜ್ಯ ಉದ್ದೇಶಗಳಿಗೆ ಮತ್ತು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡುತ್ತಿರುವುದನ್ನು ಮತ್ತು ಅಕ್ರಮ ದಾಖಲೆಗಳನ್ನು ನಿರ್ಮಿಸಿ ಸ್ವಾಧೀನದಲ್ಲಿರುವುದು ಅಂಕಿ ಅಂಶಗಳ ಮೂಲಕ ಬಹಿರಂಗವಾಗಿರುತ್ತದೆ. ಶ್ರೀ ಎ.ಟಿ.ರಾಮಸ್ವಾಮಿರವರ ಸದನ ಸಮಿತಿ, ಶ್ರೀ ವಿ.ಬಾಲಸುಬ್ರಮಣ್ಯನ್‌ರವರ ಸಮಿತಿ ನೀಡಿರುವ ವರದಿಗಳಲ್ಲಿ ದಾಖಲೆಯ ಸಮೇತ ಇಂತಹ ಭೂ ಕಬಳಿಕೆ ಪ್ರಕರಣಗಳನ್ನು ಬಹಿರಂಗಪಡಿಸಲಾಗಿದೆ ಎಂದು ಗಮನಸೆಳೆದಿದ್ದಾರೆ.
ಬೆಂಗಳೂರು ಸುತ್ತಮುತ್ತ ಸಾವಿರಕ್ಕೂ ಹೆಚ್ಚು ರೆಸಾರ್ಟ್’ಗಳು, ಸ್ಟೇ ಹೋಮ್‌ಗಳು..!
ಬೆಂಗಳೂರು ನಗರದ ಸುಮಾರು ಒಂದು ನೂರು ಕಿಮೀ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೆಸಾರ್ಟ್ಗಳು (ತಂಗುದಾಣಗಳು) ಮತ್ತು ಸ್ಟೇ ಹೋಮ್‌ಗಳು ತಲೆಯೆತ್ತಿವೆ. ವಿಶೇಷವಾಗಿ ಬಹುತೇಕ ಇಂತಹ ತಂಗುದಾಣಗಳು ಸರ್ಕಾರಿ ಕಂದಾಯ ಭೂಮಿಯ ಒತ್ತುವರಿ ಅಥವಾ ಅಕ್ರಮ ದಾಖಲೆಯ ಮೂಲಕ ಸ್ವಾಧೀನವನ್ನು ಹೊಂದಿರುತ್ತವೆ. ದಾಖಲೆಗಳಲ್ಲಿ ಇರುವ ವಿಸ್ತೀರ್ಣಕ್ಕೂ ಇವರು ಸ್ವಾಧೀನದಲ್ಲಿರುವ ವಿಸ್ತೀರ್ಣಕ್ಕೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ರೆವೆನ್ಯೂ ದಾಖಲೆಗಳನ್ನು ತಿದ್ದುವ ಮೂಲಕ ಸರ್ಕಾರಿ ಭೂಮಿಯಲ್ಲಿ ವಿಲಾಸಿ ತಂಗುದಾಣಗಳನ್ನು ಹೊಂದಿರುವ ಮತ್ತು ನಡೆಸುತ್ತಿರುವ ಅನೇಕ ದೂರುಗಳು ಸರ್ಕಾರದಲ್ಲಿ ದಾಖಲಾಗಿರುತ್ತವೆ. ರಾಜ್ಯ ಸರ್ಕಾರವು ಇಂತಹ ಅನುಮಾನಿತ ಮತ್ತು ಆರೋಪಿತ ರೆಸಾರ್ಟ್ಗಳ/ ತಂಗುದಾಣಗಳ ಭೂಮಿ ಲೆಕ್ಕ ಪರಿಶೋಧನೆಯನ್ನು (ಲ್ಯಾಂಡ್ ಆಡಿಟಿಂಗ್) ಮಾಡುವುದರ ಮೂಲಕ ಒತ್ತುವರಿಗೊಳಿಸಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಅಂತಹ ಭೂಮಿಯನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಿದರೆ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬರಲಿದೆ. ಬೆಂಗಳೂರು ನಗರ, ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು ೭೫ ಸಾವಿರ ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವ ಮಾಹಿತಿಯು ಲಭ್ಯವಿರುತ್ತದೆ. ಅದೇ ರೀತಿ ಬೆಂಗಳೂರು ಮತ್ತು ಇದರ ಸುತ್ತ ಮುತ್ತಲಿನ ಬಹುತೇಕ ತಂಗುದಾಣಗಳು ಸುಮಾರು ೫ ರಿಂದ ೬ ಸಾವಿರ ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಸ್ವಾಧೀನ ಪಡೆದಿರುವ ಮಾಹಿತಿ ಇರುತ್ತದೆ ಎಂದು ರಮೇಶ್ ಬಾಬು ಸಿಎಂ ಅವರ ಗಮನಸೆಳೆದಿದ್ದಾರೆ.
ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೋಡಿಕರಣದ ದೃಷ್ಟಿಯಿಂದ ಅವಶ್ಯಕವಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕೆಂದು ರಮೇಶ್ ಬಾಬು ಕೋರಿದ್ದಾರೆ.

























































