ಮಂಡ್ಯ: ಹಿಜಾಬ್ ನಿಷೇಧ ಹಿಂಪಡೆಯುವ ಸರ್ಕಾರ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ ಹಿಂದೂ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ರಣಕಹಳೆ ಮೊಳಗಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಆಯೋಜಿಸಲಾಗಿದ್ದ ಸಂಕೀರ್ತನೆ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಡಾ.ಪ್ರಭಾಕರ ಭಟ್, ಹಿಜಾಬ್ ನಿಷೇಧ ವಾಪಸ್ ಪಡೆಯುವ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಅವರು, ‘ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡೋಣ’ ಎಂದು ಸವಾಲೆಸೆದರು.
ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಹೇಳಿ ಶಾಲಾ ಮಕ್ಕಳಲ್ಲಿ ಮತ್ತೆ ಪ್ರತ್ಯೇಕತೆಯ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಗುಡುಗಿದ ಪ್ರಭಾಕರ ಭಟ್, ‘ನೀವೇ ಸಮವಸ್ತ್ರ ಮಾಡಿದ್ದೀರಾ. ಮತ್ತೆ ನೀವೇ ಪ್ರತ್ಯೇಕ ಮಾಡುತ್ತಿದ್ದೀರಾ. ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡುವ” ಎಂದು ಸವಾಲು ಹಾಕಿದರು.
ಒಂದು ವೇಳೆ ಹಿಜಾಬ್ ಹಾಕಿ ಶಾಲೆಗೆ ಬರಲಿ ಎಂದು ಸೂಚಿಸಿದರೆ, ನಮ್ಮ ಹುಡುಗರು ಕೇಸರಿ ಶಾಲು ಧರಿಸಿ ಶಾಲೆಗಳಿಗೆ ತೆರಳಲಿದ್ದಾರೆ. ಕೇಸರಿ ಶಾಲು ಧರಿಸಲು ನಾವೇ ಕರೆ ಕೊಡುತ್ತೇವೆ ಎಂದವರು ಹೇಳಿದರು.