ನವದೆಹಲಿ:“ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ, ಸಭೆ ಕರೆಯುತ್ತಿರುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, ತಮ್ಮ ವಿದೇಶಿ ಪ್ರವಾಸದ ವೇಳೆಯಲ್ಲೇ ರಾಜ್ಯದಲ್ಲಿ ಡಿನ್ನರ್ ರಾಜಕೀಯ ನಡೆದಿದೆ ಎಂಬ ಸುದ್ದಿ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರು ಔತಣಕೂಟಕ್ಕೆ ಏಕೆ ರಾಜಕಾರಣ ಬೆರೆಸುತ್ತೀರಿ? ಇದಕ್ಕೆ ಇಲ್ಲಸಲ್ಲದ ಅರ್ಥವನ್ನು ಏಕೆ ಕಲ್ಪಿಸುತ್ತೀರಿ? ನಾನು ಕಳೆದ ನಾಲ್ಕೈದು ವರ್ಷಗಳಿಂದ ಕುಟುಂಬದವರ ಜೊತೆ ಎಲ್ಲಿಯೂ ಹೋಗಿರಲಿಲ್ಲ. ಆದ ಕಾರಣಕ್ಕೆ ವಿದೇಶಿ ಪ್ರವಾಸಕ್ಕೆ ತೆರಳಿದ್ದೆ ಎಂದರು.
ಡಿಸಿಎಂ ಅವರ ಅನುಪಸ್ಥಿತಿಯಲ್ಲಿ ಔತಣಕೂಟ ಸಭೆ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಡಿಕೆಶಿ, ಅನೇಕ ಮಂತ್ರಿಗಳು ಸಹ ಕುಟುಂಬದವರ ಜೊತೆ ವಿದೇಶಿ ಪ್ರವಾಸ ಹೋಗಿದ್ದರು. ಬೆಂಗಳೂರಿನಲ್ಲಿ ಇದ್ದವರು ಒಂದು ಸಂಜೆ ಒಟ್ಟಿಗೆ ಸೇರಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದರು.
ಕ್ಯಾಬಿನೆಟ್ ಪುನರ್ ರಚನೆಯಾಗಬೇಕು ಎಂದು ಎಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ ಎಂದಾಗ, ‘ಯಾವ ಚರ್ಚೆಯೂ ನಡೆದಿಲ್ಲ. ಮಾಧ್ಯಮದವರಿಗೆ ಯಾರೋ ತಪ್ಪು ಮಾಹಿತಿ ನೀಡಿ, ನಿಮಗೆ ಬಿಡುವು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ಮಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಇದರ ಬಗ್ಗೆ ಮಾತನಾಡುತ್ತಾರೆ’ ಎಂದರು.























































