ಹೈದರಾಬಾದ್: ಟಿಆರ್ ಎಸ್ ಅಧಿಕಾರ ಕಳೆದುಕೊಳ್ಳುವ ದಿನ ಸಮೀಪಿಸಿದೆ ಎಂಬುದಕ್ಕೆ ಜಿಎಚ್ ಎಂಸಿ ಚುನಾವಣಾ ಫಲಿತಾಂಶವೇ ಸಾಕ್ಷಿ ಎಂದು ಬಿಜೆಪಿ ನಾಯಕರು ವಿಶ್ಲೇಷಿಸಿದ್ದಾರೆ.
ಜಿಎಚ್ಎಂಸಿ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಭಿವೃದ್ಧಿ ರಾಜಕಾರಣವನ್ನು ಜನರು ಮೆಚ್ಚಿರುವುದನ್ನು ತೋರಿಸಿದೆ. ಹಾಗೆಯೇ ಟಿಆರ್ ಎಸ್ ಮತ್ತು ಎಂಐಎಂ ಪಕ್ಷಗಳ ತುಷ್ಟೀಕರಣದ ರಾಜಕಾರಣವನ್ನು ಜನರು ತಿರಸ್ಕರಿಸಿರುವುದನ್ನು ಬಿಂಬಿಸಿದೆ. ಈ ಚುನಾವಣಾ ಫಲಿತಾಂಶದಲ್ಲಿ, ಟಿಆರ್ ಎಸ್ ಪಕ್ಷದ ಅಧಿಕಾರದ ದಿನಗಳು ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂಬ ಜನರ ಭಾವನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಟಿಆರ್ ಎಸ್ ಹಾಗೂ ಎಂಐಎಂ ಪಕ್ಷಗಳು ಬಿಜೆಪಿಯನ್ನು ತಡೆಯುವ ಪ್ರಯತ್ನ ಮಾಡಿದ್ದರೂ ಬಿಜೆಪಿ ಎತ್ತರಕ್ಕೆ ಏರಿದೆ. 2016 ರಲ್ಲಿ ಕೇವಲ ಸೀಟುಗಳನ್ನು ಹೊಂದಿದ್ದ ಬಿಜೆಪಿ ಈಗ ಪ್ರಬಲ, ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ನಾಯಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿಯ ಸಹ ಉಸ್ತುವಾರಿಯಾಗಿರುವ ಕರ್ನಾಟಕದ ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪತ್ರಕಾ ಹೇಳಿಕೆ ಬಿಡುಗಡೆ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಹೈದರಾಬಾದ್ ನಲ್ಲಿ ರಾಜ್ಯ ಬಿಜೆಪಿ ಘಟಕ ಹಾಗೂ ಇಡೀ ತಂಡದ ಉತ್ಸಾಹ ಮುಗಿಲು ಮುಟ್ಟಿತ್ತು. ಬಿಜೆಪಿ ಈ ಹೋರಾಟವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದ್ದು, ಭ್ರಷ್ಟ ಟಿಆರ್ ಎಸ್-ಎಂಐಎಂ ಆಡಳಿತ ಅಂತ್ಯವಾಗುವವರೆಗೂ ಈ ಹೋರಾಟ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಜನಾಭಿಪ್ರಾಯ ತಮ್ಮ ವಿರುದ್ಧವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಅವರ ಪುತ್ರ ಕೆ.ಟಿ.ರಾಮರಾವ್ ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಆತುರದ ಚುನಾವಣೆ, ಮಧ್ಯರಾತ್ರಿ ಆದೇಶಗಳು ಕೆಸಿಆರ್ ಪರಿವಾರದಲ್ಲಿ ಸೃಷ್ಟಿಯಾಗಿರುವ ಹತಾಶೆಯ ಲಕ್ಷಣಗಳು. ತೆಲಂಗಾಣದ ಜನರು ಸಮರ್ಥವಾದ ಪರ್ಯಾಯ ನಾಯಕತ್ವವನ್ನು ಬಯಸುತ್ತಿದ್ದಾರೆ ಎಂದವರು ಹೇಳಿದ್ದಾರೆ.