ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಯನ್ನು ಜನಸಾಮಾನ್ಯರ ಸನಿಹಕ್ಕೆ ಕೊಂಡೊಯ್ಯುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಫಲವಾಗಿ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆ.ಎಂ.ಸಿ ಮಂಗಳೂರು ಸಹಯೋಗದೊಂದಿಗೆ ಆರಂಭಿಸಲಾದ ‘ಹಬ್ ಅಂಡ್ ಸ್ಪೋಕ್’ ಮಾದರಿಯ ಡೇ-ಕೇರ್ ಕೀಮೋಥೆರಪಿಯು ಇಂದು 100 ಯಶಸ್ವಿ ಚಿಕಿತ್ಸೆಗಳನ್ನು ಪೂರೈಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯುವುದರಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಬಾರದೆಂದು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಗುಣಮಟ್ಟದ ಕೀಮೋಥೆರಪಿ ಸೇವೆ ಒದಗಿಸುತ್ತಿರುವುದು ನಮ್ಮ ಆರೋಗ್ಯ ವ್ಯವಸ್ಥೆಯ ದೊಡ್ಡ ಗೆಲುವು. ಈ ಯಶಸ್ಸಿಗೆ ಕಾರಣರಾದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆಯನ್ನು ಸಚಿವರು ಅಭಿನಂದಿಸಿದ್ದಾರೆ.
ಈಗಾಗಲೇ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ “ಡೇ ಕೇರ್ ಕಿಮೋಥೆರಫಿ” ಸೆಂಟರ್‌ಗಳನ್ನು ಸ್ಥಾಪಿಸಿ ಉಚಿತ ಸೇವೆ ಒದಗಿಸುತ್ತಿದ್ದೇವೆ. ಇಲ್ಲಿ ನಾವು ಕೇವಲ ಚಿಕಿತ್ಸೆಯನ್ನಷ್ಟೇ ನೀಡುತ್ತಿಲ್ಲ, ಬದಲಾಗಿ ರೋಗಿಗಳ ನೋವು ನಿವಾರಣೆ ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬುವ ಆಪ್ತ ಸಮಾಲೋಚನೆಯನ್ನೂ ಒದಗಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಇದುವರೆಗೂ ಸುಮಾರು 373ಕ್ಕೂ ಹೆಚ್ಚು ಕ್ಯಾನ್ಸರ್ ಬಾಧಿತರು ಉಚಿತ ಕಿಮೋಥೆರಫಿಯ ಫಲಾನುಭವಿಗಳಾಗಿರುವುದು ನಮ್ಮ ಸೇವೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ. ಕ್ಯಾನ್ಸರ್ ಸೋಲಿಸಿ, ಹೊಸ ಬದುಕನ್ನು ಕಟ್ಟಿಕೊಳ್ಳುವ ನಿಮ್ಮ ಈ ಪಯಣದಲ್ಲಿ ನಮ್ಮ ಸರ್ಕಾರ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಹೆದರಬೇಡಿ, ಉಚಿತ ಚಿಕಿತ್ಸೆ ಪಡೆಯಿರಿ ಎಂದವರು ಜನತೆಗೆ ಮನವಿ ಮಾಡಿದ್ದಾರೆ.























































