ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷವು ರಾಜ್ಯದ ಹೆಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಯುದ್ಧ ಪರಿಸ್ಥಿತಿಯಿಂದಾಗಿ ತೈಲ ಪೂರೈಕೆ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಅಡುಗೆ ಅನಿಲ ಸಿಲಿಂಡರ್ ಕೊರತೆಯಿಂದಾಗಿ ಹೊಟೇಲು ಉದ್ಯಮ ಕಂಗಾಲಾಗಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸರಬರಾಜು ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಹೊಟೇಲುಗಳ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತಂತೆ ಬೆಂಗಳೂರು ಹೊಟೇಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಏನ್ ಕಾಮತ್ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಹೊಟೇಲು ಉದ್ಯಮ Essential Service ಅಡಿಯಲ್ಲಿ ಬರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರೀಕರು ವಿದ್ಯಾರ್ಥಿಳು, ವೈದ್ಯಕೀಯ ಹಾಗೂ ಇನ್ನಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ತಮ್ಮ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ. ಇದರ ಜೊತೆಗೆ ಗ್ಯಾಸ್ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಮ್ಮ ಹೊಟೇಲು ಉದ್ಯಮವೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರದ ಗಮನಸೆಳೆದಿದ್ದಾರೆ.
ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದರು. ಹೀಗಿದ್ದರೂ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಹೊಟೇಲು ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಆದ್ದರಿಂದ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ವಿಚಾರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಗ್ಯಾಸ್ ಸರಬರಾಜನ್ನು ಪುನರಾರಂಭ ಮಾಡಿ ಹೊಟೇಲು ಉದ್ಯಮಕ್ಕೆ ಸಹಕಾರ ನೀಡುವರೆಂದು ನಾವು ನಿರೀಕ್ಷಿಸುತ್ತೇವೆ ಎಂದವರು ಹೇಳಿದ್ದಾರೆ.
ಗ್ಯಾಸ್ ಸರಬರಾಜು ನಿಂತಿರುವುದರಿಂದ ಹೊಟೇಲುಗಳು ಬಂದ್ ಆಗಲಿವೆ ಎಂದವರು ತಿಳಿಸಿದ್ದಾರೆ.

























































