ಚನ್ನಪಟ್ಟಣ: ಹೊನ್ನನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್‌ನ ಸೋಂಕಿತರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಅಲ್ಲದೆ, ಸ್ಥಳದಲ್ಲೇ ಅವರ ಸಮಸ್ಯೆ ಬಗೆಹರಿಸಿದರು.
ಕೇರ್‌ಸೆಂಟರ್‌ನಲ್ಲಿ ಸಮಸ್ಯೆಯಾಗಿದೆ ಎಂದು ಸೋಂಕಿತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿಯುತ್ತಲೇ, ಚನ್ನಪಟ್ಟಣ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿದ ಎಚ್‌ಡಿಕೆ, ತಹಶೀಲ್ದಾರ್ ಅವರಿಂದಲೇ ವಿಡಿಯೊ ಕರೆ ಮಾಡಿಸಿ, ಸೋಂಕಿತರನ್ನು ಸಂಪರ್ಕಿಸಿದರು. ಎಲ್ಲರ ಅಹವಾಲು ಆಲಿಸಿದರು. ಸಮಸ್ಯೆ ಸರಿಪಡಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾದರೆ ನೇರವಾಗಿ ತಮಗೇ ಕರೆ ಮಾಡುವಂತೆ ತಿಳಿಸಿದರು. ಸಮಸ್ಯೆ ಬಗೆಹರಿಯುತ್ತಲೇ ಸೋಂಕಿತರು ಪ್ರತಿಭಟನೆ ಕೊನೆಗೊಳಿಸಿದರು.
ಚನ್ನಪಟ್ಟಣದ ತಹಶೀಲ್ದಾರ್ ಅವರು ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ತಡೆಗಟ್ಟಲು ಅಸ್ತೆ ವಹಿಸಿ ಕೆಲಸ ಮಾಡುತ್ತಿದ್ದಾರೆ. ಜನರೂ ಅವರಿಗೆ ಸಹಕರ ನೀಡಬೇಕು ಎಂದು ಕಿವಿಮಾತು ಹೇಳಿದರು.