ಮಂಗಳೂರು: ‘ಪರೀಕ್ಷೆ ನೆಪದಲ್ಲಿ ಮುತ್ತೈದೆಯರ ಮಾಂಗಲ್ಯ, ಆಸ್ತಿಕರ ಜನಿವಾರವನ್ನು ಕಿತ್ತುಹಾಕಿ ಹಿಂದೂ ಸಂಸ್ಕೃತಿಗೆ ಧಕ್ಕೆತರುವ ರೀತಿ ನಡೆದುಕೊಳ್ಳುವುದು ಸರಿಯಲ್ಲ’ ಎಂದು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಪ್ರತಿಪಾದಿಸಿದ್ದಾರೆ. ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಆಕ್ಷೇಪಾರ್ಹ ನಿಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಬಹಿರಂಗ ಪತ್ರ ಬರೆದಿರುವ ಪದ್ಮರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಲ್ಲಿ ನಡೆಸಲಾಗುತ್ತದೆ. ಹಾಗಿರುವಾಗ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ನಿಯಮ ಯಾಕೆ ಎಂದು ಪ್ರಶ್ನಿಸಿದ್ದಾರೆ.
ವಕೀಲರೂ ಆಗಿರುವ ಪದ್ಮರಾಜ್ ಆರ್.ಪೂಜಾರಿ ಅವರು ಮಂಗಳೂರಿನ ದಸರಾ ಖ್ಯಾತಿಯ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೋಶಾಧಿಕಾರಿಯೂ ಆಗಿದ್ದಾರೆ.
ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಆಕ್ಷೇಪಾರ್ಹ ನಿಯಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು ದೇಶದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಬಗ್ಗೆ ಗಮನಸೆಳೆದಿದ್ದಾರೆ.
ಭಾರತ ದೇಶ ಹಲವು ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿನ ಸನಾತನ ಸಂಸ್ಕೃತಿಗೆ ತನ್ನದೇ ಆದ ಮಹತ್ವವೂ ಇದೆ. ಇಲ್ಲಿ ಮಾಂಗಲ್ಯಕ್ಕೂ ಅದರದ್ದೇ ಆದ ಪಾವಿತ್ರೃತೆ ಇದೆ. ಪ್ರತಿಯೊಂದು ಆಚರಣೆಯೂ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹೀಗಿದ್ದರೂ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ನೇಮಕಾತಿ ಪರೀಕ್ಷೆಯ ವೇಳೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಅಭ್ಯರ್ಥಿಗಳು ಹೊಂದಿರಬಾರದು. ಪರೀಕ್ಷೆ ಬರೆಯುವ ಮೊದಲು ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಕಾಲುಂಗುರ, ತಿಲಕ, ಜನಿವಾರ, ಕೈಬಳೆ ಇನ್ನಿತರ ಎಲ್ಲವುಗಳನ್ನೂ ತೆಗೆದಿಟ್ಟು ಪರೀಕ್ಷಾ ಕೊಠಡಿ ಪ್ರವೇಶ ಮಾಡುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಮುತ್ತೃದೆಯರು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ, ಪವಿತ್ರ ಜನಿವಾರವನ್ನು ಕಿತ್ತುಹಾಕುವಂತೆ ನಿಯಮ ರೂಪಿಸಿರುವುದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಿಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾರ್ಥಿಗಳಿಗೆ ಯಾವುದೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು. ಇಂದು ಭಾರತ ದೇಶ ತಾಂತ್ರಿಕವಾಗಿ ಅದೆಷ್ಟೋ ಮುಂದುವರಿದಿದೆ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಟೆಕ್ನಾಲಜಿಯನ್ನು ಬಳಸಿಕೊಂಡು ವ್ಯವಸ್ಥೆ ಮಾಡಲು ಸಾಧ್ಯವಿದೆ. ಹಾಗಾಗಿ ರೈಲ್ವೆ ನೇಮಕಾತಿ, ಯುಪಿಎಸ್‌ಸಿ ಹಾಗು ಕೇಂದ್ರ ಸರ್ಕಾರದ ಅಧಿನದ ಇಲಾಖೆಗಳಿಂದ ನಡೆಸು ಪರೀಕ್ಷೆಯಲ್ಲಿ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು ಸನಾತನ ಹಿಂದು ಧರ್ಮದ ಆಚಾರ-ವಿಚಾರಗಳನ್ನು ತೊಡಕಾಗದಂತೆ ಎಚ್ಚರವಹಿಸಬೇಕು ಎಂದು ಪದ್ಮರಾಜ್ ಆರ್.ಪೂಜಾರಿ ಅವರು ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.