ಬೆಂಗಳೂರು: ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಗುರುವಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ರಾಯಚೂರು ಜಿಲ್ಲಾ ಹೊರವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ, ಕೆಆರ್‌ಡಿಸಿಎಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಾಭಿವೃದ್ಧಿ ಅಧಿಕಾರಿಗಳಿಗೆ ಸಮಗ್ರ ಮಾಹಿತಿಯನ್ನು ಪಡೆಯಲಾಯಿತು.
ಕಲ್ಮಲಾ ಕ್ರಾಸ್ ನಿಂದ ಸುಮಾರು 77 ಕಿಲೋಮೀಟರ್ ಉದ್ದದ ರಾಜ್ಯ ಹೆದ್ದಾರಿ ಯೋಜನೆಯ ಬಗ್ಗೆ ಅಧಿಕಾರಿಗಳು ಸಭೆ ಅಪೂರ್ಣ ಮಾಹಿತಿಯನ್ನು ನೀಡಿದರು. ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳನ್ನು ಸಚಿವರು ಹಾಗೂ ಶಾಸಕರು ತರಾಟೆಗೆ ತಗೆದುಕೊಂಡರು. ಈ ಯೋಜನೆಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಹೈಬ್ರೀಡ್ ಅನ್ಯೂಟಿಟಿ ಮೋಡ್ ಮೂಲಕ ಕೈಗೊಳ್ಳಲಾಗುತ್ತಿರುವ ರಸ್ತೆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯನ್ನ ನೀಡಬೇಕು. ಸಭೆಗೆ ಮಾಹಿತಿ ಇಲ್ಲದೇ ಬರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವದುರ್ಗ – ಅರಕೆರೆ, ಸಿರವಾರ ಕ್ರಾಸ್‌ನಿಂದ ಕೈಗೊಳ್ಳಲಾಗುತ್ತಿರುವ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಗಳ ಬಗ್ಗೆ ವಿಸ್ತ್ರುತ ಮಾಹಿತಿಯನ್ನು ಸಚಿವರು ಪಡೆದುಕೊಂಡರು. ಕೆಲವು ಭಾಗಗಳಲ್ಲಿ ಸರಿಯಾದ ಕ್ರಮದಲ್ಲಿ ಕಾಮಗಾರಿ ನಡೆಯದೇ ಇರುವು ಬಗ್ಗೆ ಶಾಸಕರು ಸಭೆಯ ಗಮನಕ್ಕೆ ತಂದರು. ಹಲವಾರು ಕಡೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತಗೆದುಕೊಂಡರು. ಬೇಸಿಗೆ ಕಾಲದಲ್ಲಿ ಸುಮ್ಮನಿದ್ದು ಮಳೆಗಾಲದಲ್ಲಿ ಕಾಮಗಾರಿ ಪ್ರಾರಂಭಿಸಿದರೆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಗುಣಮಟ್ಟ ಇಲ್ಲದೇ ಇರುವ ಕಾಮಗಾರಿಗಳಿಂದ ಯಾವುದೇ ಪ್ರಯೋಜನವಿಲ್ಲ. ಬೇಸಿಗೆಯಲ್ಲಿ ಕಾಮಗಾರಿ ಕೈಗೊಳ್ಳದೇ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.