ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ -ಮುಡಾ ಹಗರಣ ಕುರಿತಂತೆ ತನಿಖೆಯನ್ನು ಸಿಬಿಐಗೆ ನೀಡಲು ನಿರಾಕರಿಸಿ ಹೈಕೋರ್ಟ್ ಆದೇಶಿಸಿದೆ. ಈ ಕುರಿತಂತೆ ಹೈಕೋರ್ಟ್ನ ಧಾರವಾಡ ಪೀಠ ಪ್ರಕಟಿಸಿರುವ ತೀರ್ಪು ಗಮನಸೆಳೆದಿದೆ.
ಮುಡಾ ನಿವೇಶನ ಅಕ್ರಮ ಕುರಿತಂತೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆಯಲ್ಲಿ ವಿಶ್ವಾಸ ಇಲ್ಲಾವಾಗಿದ್ದು, ಸಿಬಿಐ ತನಿಖೆಗೆ ಆದೇಶ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
3 ಲಕ್ಷ 26 ಸಾವಿರ ಮೊತ್ತದ ಜಮೀನು ಸ್ವಾಧೀನಕ್ಕೆ ಬದಲಾಗಿ ದುಬಾರಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ ಎಂದು ಆರೋಪಿಸಿದ್ದ ಸ್ನೇಹಮಯಿ ಕೃಷ್ಣ ಅವರು, ಈ ಕುರಿತ ಕ್ಯಾಬಿನೆಟ್ ಟಿಪ್ಪಣಿ, ಮುಖ್ಯ ಕಾರ್ಯದರ್ಶಿ ಟಿಪ್ಪಣಿಯೂ ಸಿಎಂ ಪತ್ನಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ಹೈಕೋರ್ಟ್ ಗಮನಸೆಳೆದಿದ್ದಾರೆ. ಪ್ರಭಾವಿಗಳಿರುವ ಈ ಕೇಸಿನಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯವಿದೆ ಎಂದು ಪ್ರತಿಪಾದಿಸಿದ್ದರು. ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದಿಸಿದ್ದರು.
ಸಿಎಂ ಸಿದ್ದರಾಮಯ್ಯ ಪರವಾಗಿ ಹಾಗೂ ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು, ಲೋಕಾಯುಕ್ತ ರಾಜ್ಯ ಸರ್ಕಾರದ ಹಿಡಿತದಲ್ಲಿದೆ ಎಂದಾದರೆ, ಸಿಬಿಐ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ ಎಂದಾಗುತ್ತದೆ. ಲೋಕಾಯುಕ್ತವು ಸ್ವತಂತ್ರ ಸಂಸ್ಥೆಯಾಗಿದ್ದು, ತನಿಖೆ ನಡೆಸುವ ಪೊಲೀಸರು ಲಿಯೋಕಾಯುಕ್ತದ ಅಧೀನದಲ್ಲಿರುತ್ತಾರೆ. ಹಾಗಾಗಿ ಲೋಕಾಯುಕ್ತ ಪೊಲೀಸರ ತನಿಖೆ ಸೂಕ್ತವಾಗಿದೆ ಎಂದು ಪ್ರತಿಪಾದಿಸಿದ್ದರು. ಒಂದು ವೇಳೆ ತನಿಖೆ ತಾರತಮ್ಯಪೂರಿತವಾಗಿದ್ದರೆ ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಗಮನಸೆಳೆದರು.
ವಾದ ಪ್ರತಿವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಲೋಕಾಯುಕ್ತ ಪೊಲೀಸರ ತನಿಖೆ ಅಸಮರ್ಪಕ ಎನ್ನುವುದಕ್ಕೆ ಕಾರಣಗಳಿಲ್ಲ ಎಂದು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.