ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.
ತಮ್ಮ ವಿರುದ್ದದ ಎಫ್‌ಐಆರ್ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್, ಸಿ.ಟಿ. ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮಧ್ಯಂತರ ಆದೇಶ ಹೊರಡಿಸಿದೆ.
ಸಿಟಿ ರವಿ ಪರ ವಾದ ಮಂಡಿಸಿದ ವಕೀಲ ಸಂದೇಶ್ ಚೌಟ , ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ. ಹಾಗಾಗಿ ಪೊಲೀಸರು ನೋಟಿಸ್ ನೀಡಬೇಕಿತ್ತು. ಆದರೆ ನಿಯಮಗಳನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯದ ಗಮನಸೆಳೆದರು. ಸಿ.ಟಿ.ರವಿ ಅವರು ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ. ಹೀಗಿರುವಾಗ ಅವರನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು ಎಂದು ವಕೀಲರು ಪೊಲೀಸರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದು, ಎಫ್‌ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಮುಂದೂಡಿದೆ.


























































