ಕೊಚ್ಚಿ: ಪುಣ್ಯಕ್ಷೇತ್ರ ಶಬರಿಮಲೆ ದೇವಸ್ಥಾನದಲ್ಲಿ ಪ್ರಸ್ತಾವಿತ ರೋಪ್‌ವೇ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನು (MoEFCC) ಕೇಳಿದೆ.
ಕೇರಳದ ಪಥನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಶಬರಿಮಲೆ ಭಾರತದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ, ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.
3,000 ಅಡಿ ಎತ್ತರದಲ್ಲಿರುವ ಶಬರಿಮಲೆಗೆ ಸಾಂಪ್ರದಾಯಿಕವಾಗಿ ಯಾತ್ರಿಕರು ಪಂಪಾ ನದಿಯ ದಡದಿಂದ ಬರಿಗಾಲಿನಲ್ಲಿ ಆರೋಹಣ ಮಾಡಿ 41 ದಿನಗಳ ವೃತಾಚರಣೆಯಲ್ಲಿ ತೆರಳುತ್ತಾರೆ. ಇದೀಗ ಈ ದೇಗುಲಕ್ಕೆ ರೋಪ್ ವೇ ನಿರ್ಮಿಸುವ ಪ್ರಸ್ತಾಪ ಇದೆ.
ನ್ಯಾಯಮೂರ್ತಿ ವಿ. ರಾಜಾ ವಿಜಯರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ವಕೀಲ ಆಯುಕ್ತರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಈ ರೋಪ್‌ವೇ ನಿರ್ಮಾಣದ ಕುರಿತು ಸ್ವಯಂಪ್ರೇರಿತ ಅರ್ಜಿಯನ್ನು ಪರಿಗಣಿಸುತ್ತಿತ್ತು. ಈ ಪ್ರಕರಣದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಗಳು ಸ್ಪಷ್ಟ ಅಭಿಪ್ರಾಯವನ್ನು ತಿಳಿಸಬೇಕು ಎಂದು ನ್ಯಾಯಪೀಠ ಹೇಳಿದೆ.