ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣ ಕುರಿತ ಚರ್ಚೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ತನಿಖೆಯತ್ತ ಚಿತ್ತ ಹರಿಸಿರುವ ಸಿಬಿಐ ತಂಡ ಮಹತ್ವದ ಸಂಗತಿಗಳನ್ನು ಪೇರಿಸಿರುವಂತೆಯೇ ಇನ್ನೊಂದೆಡೆ ಕರ್ನಾಟಕ ಸಿಎಂ ಬದಲಾವಣೆ ಸಾಧ್ಯತೆಗಳ ಮಾತುಗಳೂ ಕೇಳಿಬಂದಿವೆ.
ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಕರ್ನಾಟಕದಲ್ಲಿನ ನಾಯಕತ್ವವು ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ಪೂರಕ ಎಂಬಂತಿಲ್ಲ ಎಂದು ಮನಗಂಡಿರುವ ಬಿಜೆಪಿ ವರಿಷ್ಠರು ಇಂಥದ್ದೊಂದು ಬದಲಾವಣೆಯ ಪ್ರಕ್ರಿಯೆ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದಾಗಲೇ ಸಿಎಂ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಶೋಭಾ, ಯತ್ನಾಳ್ ಸಹಿತ ರೇಸ್‌ನಲ್ಲಿ ಹಲವರು..!
ಬಸವರಾಜ್ ಬೊಮ್ಮಾಯಿ ಅವರು ಗದ್ದುಗೆಯಿಂದ ಇಳಿದರೆ ಉತ್ತರಾಧಿಕಾರಿ ಸ್ಥಾನ ಪಡೆಯಲು ಭಾರೀ ಲಾಬಿ ನಡೆದಿದೆ. ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಟೀಂ ನಿರಂತರ ಪ್ರಯತ್ನದಲ್ಲಿದ್ದರೆ, ಇನ್ನೊಂದೆಡೆ ಆರೆಸ್ಸೆಸ್ ಗರಡಿಯಲ್ಲೂ ಒಂದಷ್ಟು ಚಿಂತನ-ಮಂಥನ ಸಾಗಿವೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಲಿಂಗಾಯತರಿಗೇ ಮುಖ್ಯಮಂತ್ರಿ ನೀಡುವ ಅನಿವಾರ್ಯತೆ ಇದೆ. ಹಾಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಜವಾಬ್ಧಾರಿ ವಹಿಸಿದರೆ ಒಳಿತು ಎಂಬ ಮಾತುಗಳೂ ಕೇಳಿಬಂದಿವೆ. ಒಂದು ವೇಳೆ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವುದಾದರೆ ಸಿ.ಟಿ.ರವಿ ಸಮರ್ಥರು ಎಂಬುದೂ ದಿಲ್ಲಿ ನಾಯಕರ ಅಭಿಪ್ರಾಯ. ಆದರೆ ಸಂಘಟನಾ ಚತುರ ಸಿ.ಟಿ.ರವಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆವರೆಗೂ ಪಕ್ಷ ಸಂಘಟಯ ಕೆಲಸದಿಂದ ಬಿಟ್ಟುಕೊಡದಿರಲು ನಿರ್ಧರಿಸಲಾಗಿದೆ. ಹಾಗಾಗಿ ಒಕ್ಕಲಿಗ ಮಹಿಳೆಗೆ ಸಿಎಂ ಸ್ಥಾನ ನೀಡಿದರೆ ಹೇಗೆ ಎಂಬ ಸಲಹೆಯೂ ವರಿಷ್ಠರ ಮುಂದಿದೆ. ಸಂಘಪರಿವಾರದ ಪೂರ್ಣಾವಧಿ ಕಾರ್ಯಕರ್ತೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂಬುದು ಆರೆಸ್ಸೆಸ್ ಪ್ರಮುಖರ ಮಾತುಗಳು.
ಶೋಭಾ-ಯತ್ನಾಳ್ ರಹಸ್ಯ ನಡೆ..?
ಈ ನಡುವೆ ಸಿಎಂ ಬದಲಾವಣೆ ಹಾಗೂ ಭಾವೀ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶೋಭಾ ಹಾಗೂ ಯತ್ನಾಳ್ ಅವರು ನಡೆಸಿದ್ದಾರೆನ್ನಲಾದ ರಹಸ್ಯ ಮಾತುಕತೆ ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಯತ್ನಾಳ್ ಸಿಎಂ ಆದರೆ ಲಿಂಗಾಯತರನ್ನು ಹಿಡಿಟ್ಟುಕೊಳ್ಳುವುದೂ ಸೇರಿದಂತೆ ಹಲವು ವಿಚಾರಗಳಲ್ಲಿ ಒಳ್ಳೆಯದಾಗುತ್ತದೆ ಎಂಬುದು ಸಂಘದ ಪ್ರಮುಖರ ಪ್ರತಿಪಾದನೆ. ಶೋಭಾ ಅವರದ್ದೂ ಇದೇ ಅಭಿಪ್ರಾಯ ಎನ್ನಲಾಗಿದೆ. ಒಂದು ವೇಳೆ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆಯವರನ್ನು ಸಿಎಂ ಮಾಡುವುದಾದರೆ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರು ಸಮಾಧಾನಪಡಿಸುವರೆಂಬ ಭರವಸೆಯೂ ಸಿಕ್ಕಿದೆ ಎನ್ನಲಾಗಿದೆ.
‘ವಿಜಯೀಭವ..’
ಈ ನಡುವೆ, ಯಡಿಯೂರಪ್ಪ ಅವರನ್ನು ದೂರವಿಡಲು ಬಿಜೆಪಿ ಸಿದ್ದವಿಲ್ಲ. ಬಿಎಸ್‌ವೈ ಪುತ್ರ, ಯುವ ನಾಯಕ ವಿಜಯೇಂದ್ರ ಅವರಿಗೆ ವರ್ಚಸ್ಸು ಇದ್ದು ಖಡಕ್ ನಡೆಯೂ ಬಿಜೆಪಿಗೆ ಸೂಕ್ತವಾಗಿದೆ ಎಂಬುದು ಹಲವರ ಅಭಿಪ್ರಾಯ. ಹಾಗಾಗಿ ಬಿ.ವೈ.ವಿಜಯೇಂದ್ರ ಅವರನ್ನು ಡಿಸಿಎಂ ಮಾಡುವ ಅಥವಾ ಗೃಹ ಮಂತ್ರಿಯಾಗಿಸುವ ಬಗ್ಗೆಯೂ ವರಿಷ್ಠರು ಗಮನಹರಿಸಿದ್ದಾರೆ ಎಂಬುದೂ ಸ್ಪಷ್ಟ.
‘ಬಿ-ಪ್ಲಾನ್’.. ಹೆಚ್ಡಿಕೆಗೆ ತ್ರಿಬಲ್ ಸ್ಟಾರ್?
ಇದೆಲ್ಲದರ ನಡುವೆ ಬಿಜೆಪಿಯ ಹಲವು ಶಾಸಕರು ಪಕ್ಷ ತೊರೆಯುವ ಸೂಚನೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಹಾಗೂ ಯತ್ನಾಳ್ ನೀಡಿರುವ ಸುಳಿವು ಕೂಡಾ ಅದುವೇ. ಒಂದು ಮೂಲದ ಪ್ರಕಾರ ಬೊಮ್ಮಾಯಿ ಸಂಪುಟದ ಐವರು ಸಚಿವರೂ ಸೇರಿದಂತೆ ಹಲವರು ಈ ಬಗ್ಗೆ ಸದ್ಯವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ತಲುಪಿದೆ. ಹಾಗೊಂದು ವೇಳೆ ಬೆಳವಣಿಗೆ ನಡೆದರೆ, ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಯೋಚನೆಯೂ ಇದೆ. ಹಾಗೊಂದು ವೇಳೆ ನಡೆದಲ್ಲಿ ಕುಮಾರಸ್ವಾಮಿ ತ್ರಿಬಲ್ ಸ್ಟಾರ್ (ಮೂರನೇ ಬಾರಿಗೆ ಸಿಎಂ) ಆಗುವುದು ಖಚಿತ..!