ಬೆಂಗಳೂರು: ಸಿಎಂ ಯಡಿಯೂರಪ್ಪ ಜೊತೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳ ಒಪ್ಪಂದ ಮಾಡಿದ್ದಾರ? ಹೆಚ್ಡಿಕೆ-ಸಿಎಂ ನಡುವೆ ಹಗಲು ಹೊತ್ತಿನಲ್ಲಿ ಭೇಟಿ ನಡೆದರೆ, ಡಿಕೆಶಿ-ಬಿಎಸ್‌ವೈ ನಡುವೆ ರಾತ್ರಿ ಹೊತ್ತಿನಲ್ಲಿ ಮೀಟಿಂಗ್ ಏರ್ಪಡುತ್ತಿದೆಯಂತೆ. ಈ ಕುರಿತಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಡದಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಸ್ತುತ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆ ಕುರಿತಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿಎಂ ನಡೆ ಬಗ್ಗೆಯೂ ಬೇಸರ ಹೊರಹಾಕಿದರು.
ನಾನು ನನ್ನ ಜಿಲ್ಲೆ ರಾಮನಗರದ ಸಮಸ್ಯೆಗಳ ಬಗ್ಗೆ ಮಾತನಾಡಿದ ಮರುದಿನವೇ ಕುಮಾರಸ್ವಾಮಿಯವರು ಮುಖ್ಯಮಂತ್ರಿಯ ಮನೆಗೆ ಓಡಿ ಹೋಗುತ್ತಾರೆ. ಅದು ನನಗೆ ತಿರುಗುಬಾಣವಾಗುತ್ತಿದೆ ಎಂದರು.
ಕುಮಾರಸ್ವಾಮಿಯವರು ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದಾರೆ. ರಾಜಕೀಯವಾಗಿ ದಿನೇ-ದಿನೇ ದುರ್ಬಲವಾಗುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಹಕಾರವಿಲ್ಲದಿದ್ದರೇ ಜೆಡಿಎಸ್ ಶಾಸಕರು ಆ ಪಕ್ಷದಲ್ಲಿ ಇರುತ್ತಿರಲಿಲ್ಲ. ಅವರನ್ನು ಉಳಿಸಿಕೊಳ್ಳಲು ಪದೇ-ಪದೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ಯೋಗೇಶ್ವರ್.ದೂರಿದರು.
ರೇಣುಕಾಚಾರ್ಯಗೆ ಸಿ.ಪಿ.ಯೋಗೇಶ‍್ವರ್ ತಿರುಗೇಟು:
ನಾನು ರಾಜ್ಯ ಬಿ.ಜೆ.ಪಿ ಸರ್ಕಾರ ಹಾಗೂ ಬಿ.ಜೆ.ಪಿ ಪಕ್ಷದೊಳಗಿನ ಲೋಪದೋಷಗಳ ಬಗ್ಗೆ ಮತ್ತು ನನಗೆ ಆಗಿರುವ ನೋವುಗಳ ಬಗ್ಗೆ ಆಯಾ ಸಂದರ್ಭದಲ್ಲಿ ನನ್ನ ನಿಲುವನ್ನು ಪ್ರದರ್ಶಿಸಿದ್ದೇನೆ. ಅದಕ್ಕೆ ಬದ್ಧವಾಗಿರುತ್ತೇನೆ ಎಂದವರು ಸ್ಪಷ್ಟನೆ ನೀಡಿದರು.
ರೇಣುಕಾಚಾರ್ಯರವರು ಸಿ.ಎಂ ರವರ ರಾಜಕೀಯ ಕಾರ್ಯದರ್ಶಿ ಆಗಬೇಕಾದರೆ ನನ್ನ ಶ್ರಮವು ಇದೆ. ಅವರಿಗೆ ಸಪ್ತ ಸಚಿವರ ವಸತಿ ಗೃಹದಲ್ಲಿ ಕ್ವಾಟರ್ಸ್ ದೊರೆಯಲು ಹಾಗೂ ಹೊನ್ನಾಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ರೂ.1000.00 ಕೋಟಿ ಅನುದಾನ ಸಿಗಲು ನನ್ನ ಅಳಿಲು ಸೇವೆ ಇದೇ ಎಂಬುದನ್ನು ಅವರು ಮರೆಯಬಾರದು ಎಂದು ಯೋಗೇಶ್ವರ ತಿರುಗೇಟು ನೀಡಿದ್ದಾರೆ.
ನನ್ನನ್ನು ರಾಜೀನಾಮೆ ನೀಡಿ, ವಿಧಾನಸಭೆಗೆ ಆಯ್ಕೆಯಾಗಿ ಬನ್ನಿ ಎಂದು ರೇಣುಕಾರ್ಯ ಸವಾಲು ಹಾಕಿದ್ದಾರೆ. ನಾನು ಸಚಿವನಾಗಿದ್ದಾಗಲೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿದ್ದೇನೆ. 5 ಬಾರಿ ವಿವಿಧ ಚಿನ್ಹೆಗಳಲ್ಲಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ರೇಣುಕಾಚಾರ್ಯ ರವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಬಗ್ಗೆ 40 ಶಾಸಕರು ಹೈಕಮಾಂಡಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ವರಿಷ್ಠರಿಗೆ ಹೇಳಿದ್ದೇನೆ. ಮುಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ನುಡಿದರು.
ಇದೇ ವೇಳೆ, ಕುಮಾರಸ್ವಾಮಿ ಯಡಿಯೂರಪ್ಪರವರಿಗೆ ದುಂಬಾಲು ಬೀಳಲು ಹಗಲು ಹೊತ್ತು ಹೋದರೇ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾತ್ರಿವೇಳೆ ಸಿ.ಎಂ ರವರನ್ನು ಭೇಟಿಯಾಗುತ್ತಾರೆ ಎಂದರು. L