ಹಿರಿಸಾವೆ : ರಾಷ್ಟ್ರೀಯ ರೈತ ದಿನಾಚರಣೆ ಪ್ರಯುಕ್ತ ಕೃಷಿಯಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಸಾಧಕರಿಗೆ ಆನಂದ್ ಪ್ರತಿಷ್ಠಾನ ‘ನೇಗಿಲ ಯೋಗಿ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಶೂನ್ಯ ಬಂಡವಾಳ, ಹಳ್ಳಿಯಲ್ಲಿ ಸಿಗುವ ಸ್ಥಳೀಯ ಸಂಪನ್ಮೂಲಗಳಿಂದ ಗ್ರಾಮೀಣ ಬಡ ರೈತ ಯಶಸ್ವಿಯಾಗಬಲ್ಲ ಎಂಬುದನ್ನು ಸಾಭೀತುಪಡಿಸುವ ಉದ್ದೇಶದಿಂದ ಹಿರಿಸಾವೆ ಹೋಬಳಿಯ ಶ್ರೀ ಗಿರಿ ಕ್ಷೇತ್ರದ ಶ್ರೀ ಗಿರಿಲಕ್ಷ್ಮೀ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಏಕಾದಶಿದಂದು ‘ರೈತ ದೇವೋಭವ’ ಸಮಾವೇಶವನ್ನು ಆಯೋಜಿಸಲಾಗಿತ್ತು.
ವೈಜ್ಞಾನಿಕ ಪದ್ದತಿಯಲ್ಲಿ ಮಿಶ್ರ ಬೆಳೆಗಳ ಜೊತೆಗೆ ಸಾವಯವ ಕೃಷಿಯೊಂದಿಗೆ ರೈತ ಶ್ರೀಮಂತನಾಗಬಲ್ಲ ಎಂಬ ಸಂದೇಶವನ್ನು ಸಾರಿದ ಸಾಧಕರ ಸಂವಾದ ಸಮಾವೇಶದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನೇಗಿಲುಯೋಗಿ ಪಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ ಸಂತೆಶಿವಾರ ಬಸವರಾಜು, ಗೊಲ್ಲರಹೊಸಳ್ಳಿ ಗಣೇಶ್, ಸೋರೆಕಾಯಿಪುರ ಪವನ್, ರಾಜಾಪುರ ಲಕ್ಷ್ಮೀಶ್, ಓಂಕಾರಮೂರ್ತಿ, ರಾಘವೇಂದ್ರ ಬೆಕ್ಕ, ವಗ್ಗರಳ್ಳಿ ಪ್ರವೀಣ್, ಬಳದೆರೆ ಮಂಜುನಾಥ್ ಸೇರಿದಂತೆ ಹಲವರು ಕೃಷಿ ತಜ್ಞರು ತಮ್ಮ ಅನುಭವವನ್ನು ಹಂಚಿಕೊಂಡು ಕೃಷಿಯಲ್ಲಿ ಲಾಭವನ್ನು ಗಳಿಸುವ ಮಾರ್ಗೋಪಾಯಗಳನ್ನು ವಿವರಿಸಿದರು.
ಸಾಂಪ್ರದಾಯಿಕ ರೈತ ಪದ್ಧತಿಯ ಜೊತೆಜೊತೆಗೆ ಚಾಲ್ತಿಯಲ್ಲಿರುವ ರೈತ ಪದ್ದತಿಯಲ್ಲಿ ಕೃಷಿಕ ಎದುರಿಸುತ್ತಿರುವ ಸಮಸ್ಯೆಗಳು, ಅನುಭವಿಸುತ್ತಿರುವ ನಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ವಿಧಾನಗಳ ವಿಷಯ ವಿನಿಮಯಕ್ಕಾಗಿ ಕೃಷಿಕರ ಸಮ್ಮೇಳನವಾಗಿ ಆನಂದ್ ಪ್ರತಿಷ್ಠಾನ ರೈತದೇವೋಭವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಆನಂದ್ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಹರಿಸಲು ಸಾಧ್ಯವಾಗದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ, ವಿದೇಶಗಳಿಗೆ ರಪ್ತು ಮಾಡುವ ಉತ್ಪನ್ನಗಳನ್ನು ಬೆಳೆಸುವ ವಿಧಾನಗಳ ಕುರಿತು ತಜ್ಞರೊಂದಿಗೆ ನೇರವಾಗಿ ರೈತರು ಸಂವಾದಗಳನ್ನು ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಆನಂದ್ ಪ್ರತಿಷ್ಠಾನದ ಅಧ್ಯಕ್ಷ ಆನಂದ್ ಚನ್ನಳ್ಳಿಯವರು ರೈತರಿಗೆ 1,101 ಹಣ್ಣಿನ ಗಿಡಗಳನ್ನು ವಿತರಿಸಿದರು.






















































