ಮಂಗಳೂರು: ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ‘ಶಿವಧೂತ ಗುಳಿಗೆ’. ದೈವಾರಾಧನೆ ಎಂದರೆ ತುಳುನಾಡಿನ ಧಾರ್ಮಿಕತೆ ಮತ್ತು ನಂಬಿಕೆ. ಇದು ಕೇವಲ ಆಚರಣೆಯಲ್ಲ; ತುಳುನಾಡಿನ ಬದುಕಿನ ಸಂಸ್ಕೃತಿಯೂ ಹೌದು ಎನ್ನುವುದನ್ನು ಅದ್ಭುತ ರಂಗಪ್ರಯೋಗದ ಮೂಲಕ ತೋರಿಸಿಕೊಟ್ಟರು ಕೊಡಿಯಾಲ್‌ಬೈಲ್‌ರವರು. ಇದೀಗ ಇವರ ನಿರ್ದೇಶನದ ‘ಶಿವಧೂತ ಗುಳಿಗೆ’ ನಾಟಕದ ಬಗ್ಗೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವಹೇಳನ ಮಾಡಿರುವುದು ದೈವಾರಾದನೆ ಮಾತ್ರವಲ್ಲ ಕೋಟ್ಯಂತರ ಮಂದಿ ದೈವ ಭಕ್ತರಿಗೆ ಮಾಡಿದ ಅಪಮಾನ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯೂ ಆಗಿರುವ ವಕೀಲ ಪದ್ಮರಾಜ್ ಆರ್ ಪ್ರತಿಕ್ರಿಯಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ನಡೆದ ಶಿವಧೂತ ಗುಳಿಗೆ ನಾಟಕವನ್ನು ಸುಮಾರು 16 ಸಾವಿರ ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ಊರಲ್ಲಿ ಗೃಹಸಚಿವರು ಗುಳಿಗನ್ನು ಜಪಾನ್ ಮಾತ್ರೆಗೆ ಹೋಲಿಕೆ ಮಾಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ಪದ್ವರಾಜ್, ಕೂಡಲೇ ಗೃಹಸಚಿವರು ತುಳುನಾಡು ಸೇರಿದಂತೆ ದೈವ ಭಕ್ತರಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಮಾಧ್ಯಮ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
ತುಳುನಾಡಿನ ದೈವಾರಾಧನೆ ಬಗ್ಗೆ ಇವರಿಗೇನು ಗೊತ್ತಿದೆ? ರಾಜ್ಯದ ಗೃಹ ಸಚಿವರಾಗಿ ದೈವಾರಾಧನೆ ಬಗ್ಗೆ ಪರಿಜ್ಞಾನ ಇಲ್ಲದೆ; ವಿವೇಚನೆ ರಹಿತವಾಗಿ ಮಾತನಾಡುವುದನ್ನು ಬಿಟ್ಟು, ಆ ಬಗ್ಗೆ ಜ್ಞಾನ ಇರುವವರಲ್ಲಿ ಮಾಹಿತಿ ಪಡೆದು ಮಾತನಾಡಲಿ. ಅದನ್ನು ಬಿಟ್ಟು ಇಂತಹ ಅರೆಜ್ಞಾನದ ಮಾತುಗಳಿಗೆ ತುಳುನಾಡಿನ ಜನ ಎಂದಿಗೂ ಕ್ಷಮೆ ನೀಡಲಾರರು ಎಂದೂ ಪದ್ಮರಾಜ್ ಅವರು ಅಭಿಪ್ರಾಯ ವ್ಯಯಕ್ತಪಡಿಸಿದ್ದಾರೆ.