ಬೆಂಗಳೂರು: ಕೆಲವು ದಿನಗಳಿಂದ ನಮ್ಮ ರಾಜ್ಯದ ರಬ್ಬರ್ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ. ಈ ಕುರಿತಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್, ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಮ್ಮ ಎಲ್ಲ ಕೇಂದ್ರ ಸಚಿವರು ಈ ಬಗ್ಗೆ ತುರ್ತು ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ರಬ್ಬರ್ ಬೆಳೆಯನ್ನು ವಾಣಿಜ್ಯ ಬೆಳೆಯೆಂದು ಪರಿಗಣಿಸಿ, ಕನಿಷ್ಟ ಬೆಂಬಲ ಬೆಲೆ (MSP) ವ್ಯಾಪ್ತಿಯಿಂದ ಹೊರಗಿಟ್ಟಿದೆ. ಪರಿಣಾಮ, ವಿದೇಶಗಳಿಂದ ಅಗ್ಗದ ರಬ್ಬರ್ ಅನ್ನು ಆಮದು ಮಾಡಿಕೊಳ್ಳುವುದು ಮತ್ತು ಕೃತಕ ರಬ್ಬರ್ನ ಹಾವಳಿಯಿಂದ ದೇಶೀಯ ಮಾರುಕಟ್ಟೆಯಲ್ಲಿ ನಮ್ಮ ರೈತರ ರಬ್ಬರ್ ಬೆಳೆಗೆ ಬೆಲೆ ಕುಸಿದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆ ಪಾತ್ರದಲ್ಲಿ ಗಮನಸೆಳೆದಿದ್ದಾರೆ.
ಕೆಲವು ದಿನಗಳಿಂದ ನಮ್ಮ ರಾಜ್ಯದ ರಬ್ಬರ್ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದೇನೆ. ಅದನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಮ್ಮ ಎಲ್ಲ ಕೇಂದ್ರ ಸಚಿವರುಗಳ ಗಮನಕ್ಕೆ ತರಲು ಬಯಸುತ್ತಿದ್ದು, ಮಾನ್ಯ ಸಚಿವರುಗಳು ತುರ್ತು ಗಮನ ಹರಿಸುವಂತೆ… pic.twitter.com/aPAgJoKemT
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 4, 2025
ರಬ್ಬರ್ ಉದ್ಯಮದ ಎಲ್ಲಾ ಪ್ರಮುಖ ನಿರ್ಣಯಗಳು (ಬೆಲೆ ಸೇರಿ) ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ರಾಜ್ಯ ಸರ್ಕಾರಕ್ಕೆ ಹಸ್ತಕ್ಷೇಪ ಮಾಡಲು ಯಾವ ಅವಕಾಶವೂ ಇರುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ರಾಜ್ಯದ ರಬ್ಬರ್ ಬೆಳಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಸ್ಪಂದಿಸಬೇಕೆಂದು ವಿವರಿಸಿದ್ದಾರೆ.
ತುರ್ತು ಬೆಂಬಲ ಬೆಲೆ ಘೋಷಣೆ: ಕೇಂದ್ರ ಸರ್ಕಾರದ ಅಧೀನದ ಕೃಷಿ ವೆಚ್ಚ ಮತ್ತು ಧಾರಣೆ ಆಯೋಗ (CACP) ತಕ್ಷಣವೇ ನೈಸರ್ಗಿಕ ರಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ರಬ್ಬರ್ ನೀತಿಯಂತೆ, ನೂತನ ತಂತ್ರಜ್ಞಾನ, ರಫ್ತು ಮಾರುಕಟ್ಟೆ ಮತ್ತು ಹೊಸ ಬಳಕೆಗಳ ಆವಿಷ್ಕಾರಗಳನ್ನು ಪೂರೈಸುವಂತೆ ಕೇಂದ್ರ ವಾಣಿಜ್ಯ ಇಲಾಖೆಯಲ್ಲಿ ತಮ್ಮ ಪ್ರಭಾವ ಬಳಸಬೇಕು ಎಂದು ಒತ್ತಾಯಿಸಿರುವ ಅವರು, ಎಲ್ಲ ಕೇಂದ್ರ ಸಚಿವರುಗಳು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಬಲ್ಲವರಾದ್ದರಿಂದ ಕೇಂದ್ರಕ್ಕೆ ಅವರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕೆಂದೂ ಕೋರಿದ್ದಾರೆ.



















































