ಬೆಂಗಳೂರು: ಗ್ರೇಟರ್ ಬೆಂಗಳೂರು ಪರಿಕಲ್ಪನೆ ಮೂಲಕ ಸಿಲಿಕಾನ್ ಸಿಟಿಯನ್ನು ಭಾಗಗಳಾಗಿ ವಿಂಗಡಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಪ್ರತಿಪಕ್ಷಗಳ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಆದರೆ ಕಲಾಪಗಳ ಪಟ್ಟಿಯಲ್ಲಿ ಈ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರ್ಯಾಲೋಚಿಸಿ, ಅನುಮೋದನೆ ಪಡೆಯುವ ಸೂಚನೆ ದೊರಕಿದೆ. ಈ ಬಗ್ಗೆ ಬಿಜೆಪಿ ಶಾಸಕರು ಸರ್ಕಾರವನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ವನ್ನು ಮಂಡಿಸಿದರು. ಈ ವಿಧೇಯಕ ಸುಮಾರು 172 ಪುಟಗಳನ್ನು ಹೊಂದಿದೆ. ಇದೊಂದು ಮಹತ್ವದ, ಗಂಭೀರವಾಗಿ ಅಧ್ಯಯನ ಮಾಡಬೇಕಾದ, ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾದ ವಿಷಯ ಎಂದಿದ್ದಾರೆ.
ಅಂದು ನಮ್ಮೆಲ್ಲರ ಒತ್ತಾಯಕ್ಕೆ ಮಣಿದ ಶಿವ ಕುಮಾರ್, ಈ ವಿಧೇಯಕವನ್ನು ತರಾತುರಿಯಲ್ಲಿ ತರುವುದಿಲ್ಲ ಹಾಗೂ ಬೆಂಗಳೂರಿನ ಶಾಸಕರೆಲ್ಲರ ಹಾಗೂ ಇತರ ಶಾಸಕರ ಅಭಿಪ್ರಾಯ ಪಡೆಯುವುದಕ್ಕಾಗಿ ಜುಲೈ 27 (ಶನಿವಾರ) ರಂದು ಸಭೆ ಕರೆಯುವುದಾಗಿ ತಿಳಿಸಿದ್ದರು. ಆದರೆ ಗುರುವಾರದ ಕಲಾಪಗಳ ಪಟ್ಟಿಯಲ್ಲಿ ಈ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರ್ಯಾಲೋಚಿಸಿ, ಅನುಮೋದನೆ ಪಡೆಯುವ ಸೂಚನೆ ದೊರಕಿದೆ ಎಂದವರು ತಿಳಿಸಿದ್ದಾರೆ.
ಶಿವಕುಮಾರ್ ರವರು ತಾವು ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಾರೋ ಅಥವಾ ಮೂಡಾ ಹಗರಣ ಕುರಿತು ನಾವು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ, ನಮ್ಮ ವಿರೋಧದ ನಡುವೆ ಯಾವುದೇ ಚರ್ಚೆ, ಸಮಾಲೋಚನೆ ನಡೆಸದೆ Buldozed ಅನುಮೋದನೆ ಪಡೆದುಕೊಳ್ಳುವರೋ, ಎದುರು ನೋಡುತ್ತಿದ್ದೇನೆ ಎಂದವರು ಹೇಳಿದ್ದಾರೆ.