ಧಾವಣಗೆರೆ: ಜಗಳೂರು ತಾಲ್ಲೂಕು ಪಂಚಾಯತಿ ಕಚೇರಿ ಮುಂಭಾಗದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರೊಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೆಲಸ ಮಾಡಿದ ಹಣ ಅಧಿಕಾರಿಗಳು ಕೊಡಲು ಸತಾಯಿಸಿದ್ದಕ್ಕೆ ಮನನೊಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭರಮಸಮುದ್ರ ಗ್ರಾಮದ ಪರಿಶಿಷ್ಟ ಜಾತಿಯ ಸದಸ್ಯ ತಿಪ್ಪೇಸ್ವಾಮಿ ಅವರು ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಗ್ರಾಮ ಪಂಚಾಯತಿ ವತಿಯಿಂದ ತಮ್ಮ ಗ್ರಾಮದಲ್ಲಿ ಅಧಿಕಾರಿಗಳ ಮಾತು ನಂಬಿ ಲಕ್ಷಾಗಟ್ಟಲೆ ಹಣ ವಿನಿಯೋಗ ಮಾಡಿ ಮೋಟಾರು ರಿಪೇರಿ, ಬೀದಿ ದೀಪ, ಚರಂಡಿ ಸ್ವಚ್ಚತಾ ಸೇರಿದಂತೆ ಹಲವು ಕೆಲಸಗಳನ್ನು ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೆಲಸ ಮಾಡಿ ವರ್ಷವೇ ಕಳೆದಿದೆ ಆದರೆ ಮಾಡಿದ ಬಿಲ್ ಪಾವತಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೊಟ್ರೇಶ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ತಾಲ್ಲೂಕು ಕಚೇರಿ ಬಳಿ ತೆರಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಧಾವಿಸಿದ ಕಚೇರಿ ಸಿಬ್ಬಂದಿ ರಕ್ಷಿಸಿದ್ದಾರೆ.
ಈ ವೇಳೆ ಮಾತನಾಡಿದ ತಿಪ್ಪೇಸ್ವಾಮಿ, ಸುಮಾರು ಒಂದುವರೆ ವರ್ಷಗಳಿಂದ ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಸ್ವಂತ ಹಣ ಖರ್ಚು ಮಾಡಿದ್ದೇನೆ. ಅಧಿಕಾರಿಗಳ ಭರವಸೆ ಮಾತು ನಂಬಿ ಕೆಲಸ ಮಾಡಿಸಿದ್ದೇನೆ. ಇದಕ್ಕೆ ಸಂಬಂದಿಸಿದಂತೆ ಓಚರ್ ಬಿಲ್ ಎಲ್ಲವನ್ನೂ ಕೊಟ್ಟರೂ ಬಿಲ್ ಮಾಡುತ್ತಿಲ್ಲ. 15ನೇ ಹಣಕಾಸು ಹಾಗು ವರ್ಗ1ರಲ್ಲಿ ಸಾಕಷ್ಟು ಹಣ ಡ್ರಾ ಮಾಡಿರುವ ಅಬಿವೃದ್ದಿ ಅಧಿಕಾರಿ, ನಮಗೆ ಸಂಬಂಧಿಸಿದ ಹಣ ಕೊಡಲು ಸತಾಯಿಸುತ್ತಿದ್ದಾರೆ. ಕೇಳಿದರೆ ಬೆದರಿಕೆ ಒಡ್ಡುತ್ತಾರೆ ಎಂದು ದೂರಿದ್ದಾರೆ.
ಈ ಘಟನೆ ತಿಳಿದು ಕಚೇರಿಗೆ ಧಾವಿಸಿದ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಕೆಂಚಪ್ಪ ಮಾತನಾಡಿ, ಅಭಿವೃದ್ಧಿ ಅಧಿಕಾರಿ ಬಗ್ಗೆ ಅನೇಕ ದೂರು ಬಂದಿದ್ದು ಶೀಘ್ರವೇ ಅವರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂದ್ದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.





















































