ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವಂತೆ ಅವಿರತ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರ ಸಂಘ ಇದೀಗ ತನ್ನ ಹೋರಾಟ ತೀವ್ರಗೊಳಿಸಿ ಮತ್ತೆ ಸರ್ಕಾರದ ಕಣ್ತೆರೆಸಲು ಮುಂದಾಗಿದೆ.
ಮುಂದುವರೆದ ಭಾಗವಾಗಿ ರಾಜ್ಯಾದ್ಯಂತ “ಮಾಡು ಇಲ್ಲವೇ ಮಡಿ” ಹೋರಾಟಕ್ಕೆ ಕರೆ ನೀಡಿ ರಾಜ್ಯಾದ್ಯಂತ NPS ಸಂಕಲ್ಪ ಯಾತ್ರೆಯನ್ನು ಕೈಗೊಂಡಿದೆ. ಇದೇ ಡಿ.19ರಂದು ರಾಜ್ಯದ 16 ಜಿಲ್ಲೆಗಳಲ್ಲಿ ಹೋರಾಟಕ್ಕೆ ನೌಕರರನ್ನು ಸಜ್ಜುಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ತೇಜ ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದಿಂದ ಈ ದಿನ ಒಂದು ಆದೇಶವನ್ನು ಹೊರಡಿಸಿದೆ ಕಳೆದ 2006 ರಿಂದ ಜಾರಿಗೆ ಬರುವಂತೆ NPS ಯೋಜನೆಗೆ ಒಳಪಡುವ ನೌಕರರಿಗೆ ನಿವೃತ್ತಿ ಮತ್ತು ಮರಣ ಉಪಧನವನ್ನು DCRG ಮತ್ತು ಫ್ಯಾಮಿಲಿ ಪಿಂಚಣಿಯನ್ನು ಜಾರಿಗೆ ತಂದಿದೆ. ಇದು ಸಂಘದ ಅವಿರತ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆದರೂ ಪ್ರಸ್ತುತ ರಾಜಸ್ಥಾನ ಛತ್ತೀಸ್ಗಡ ಮತ್ತು ಜಾರ್ಖಂಡಗಳಲ್ಲಿ NPS ಯೋಜನೆಯನ್ನು ರದ್ದುಗೊಳಿಸಿರುವುದರಿಂದ ಕರ್ನಾಟಕದಲ್ಲೂ NPS ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಂಘವು ಮುಂದಾಗಿರುವುದಾಗಿ ಶಾಂತರಾಮ್ ತೇಜ ತಿಳಿಸಿದ್ದಾರೆ.





















































