ಒಬ್ಬ ದಾನಶೂರನ ಮಗನ ಹುಟ್ಟು ಹಬ್ಬ.. ಒಂದು ಕುಟುಂಬಕ್ಕೆ ಆಶ್ರಯ ದಾನ.. ಹಬ್ಬದ ಸಂಭ್ರಮ ಸಡಗರದಲ್ಲಿ ಮಿಂದೆದ್ದದ್ದು ಇಡೀ ಊರ ಜನ..
ಉಡುಪಿ: ತನ್ನ, ತನ್ನವರ ಹುಟ್ಟು ಹಬ್ಬದಂದು ಗಿಫ್ಟ್ ಪಡೆಯುತ್ತಾರೆಯೋ ಹೊರತು, ಕೊಡುಗೆ ನೀಡುವವರು ಕಡಿಮೆ. ಕರುನಾಡಿನ ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಕೆಲ ದಿನಗಳ ಹಿಂದೆ ತಮ್ಮ ಹುಟ್ಟು ಹಬ್ಬದಂದು ನಿರ್ಗತಿಕರಿಗೆ ಮನೆಯನ್ನೇ ಗಿಫ್ಟ್ ಮಾಡಿ ಕಲಿಯುಗ ಕರ್ಣ ಎಂದು ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ತನ್ನ ಪುತ್ರನ ಜನ್ಮ ದಿನದಂದು ಕೂಡಾ ಶೋಷಿತ ವರ್ಗದ ನಿರ್ಗತಿಕ ಕುಟುಂಬಕ್ಕೆ ಸೂರು ಕೊಟ್ಟು ಮಹಾಮಾನವತಾದಿಯಾಗಿ ಗುರುತಿಸಿಕೊಂಡಿದ್ದಾರೆ.
ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ಉಡುಪಿ ಜಿಲ್ಲೆ ಬೈಂದೂರು ಸಮೀಪದ ಕೊಡೆರಿ ಗ್ರಾಮ. ಈ ಗ್ರಾಮದ ಬಡ ಮಹಿಳೆ ರವಳಿ ನಾಗಮ್ಮ ಕಾರ್ವಿ ಎಂಬವರ ಕುಟುಂಬಕ್ಕೆ ಗೋವಿಂದ ಬಾಬು ಪೂಜಾರಿಯವರು ಮನೆ ಕಟ್ಟಿಕೊಟ್ಟಿದ್ದಾರೆ. ತನ್ನ ಮಗ ಪ್ರಜ್ವಲ್ ಪೂಜಾರಿಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಹೊಸ ಮನೆಯನ್ನು ‘ಗೃಹ ಪ್ರವೇಶ’ ಸಂಪ್ರದಾಯ ನೆರವೇರಿಸಿ, ಹಸ್ತಾಂತರ ಮಾಡಿದ್ದಾರೆ. ನಾಡಿನ ಗಣ್ಯಾತಿಗಣ್ಯರು, ಉನ್ನತಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಕೈಂಕರ್ಯ ನೆರವೇರಿದೆ. ಈ ನೂತನ ಮನೆಯಲ್ಲಿ, ಅದೇ ಬಡಪಾಯಿಗಳ ನಡುವೆಯೇ ಬಾಲಕ ಪ್ರಜ್ವಲ್‌ನ ಹುಟ್ಟು ಹಬ್ಬ ಆಚರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಈ ಸಂದರ್ಭ ಊರಿಗೆ ಊರೇ ಹಬ್ಬದ ರೀತಿ ಸಂಭ್ರಮಿಸಿದೆ.
ಏನಿದು ‘ಆಶ್ರಯ ಕೈಂಕರ್ಯ’..?
ಬಡತನದಲ್ಲೇ ಬಾಲ್ಯ ಕಳೆದಿದ್ದ ಗೋವಿಂದ ಪೂಜಾರಿ ತನ್ನ ಪರಿಶ್ರಮದಿಂದಲೇ ಹಲವಾರು ಕಂಪನಿಗಳನ್ನು ಕಟ್ಟಿ ಶ್ರೀಮಂತ ಉದ್ಯಮಿಯಾದವರು. ಹೀಗಿದ್ದರೂ ಬಾಲ್ಯದ ಸ್ನೇಹಿತರು, ತನ್ನೂರಿನವರ ಪ್ರೀತಿಯ ಋಣ ತೀರಿಸಲು ಒಂದಿಲ್ಲೊಂದು ಜನಸ್ನೇಹೀ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.
ಕೆಲ ಸಮಯದ ಹಿಂದೆ, ಬಿರು ಬೇಸಿಗೆ ಸಂದರ್ಭದಲ್ಲಿ ಬೈಂದೂರು ಸಮೀಪದ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಲಕ್ಷಾಂತರ ರೂಪಾಯಿ ಯೋಜನೆ ರೂಪಿಸಿ, ಜನ ಸಮೂಹಕ್ಕೆ ಜೀವಜಲ ಒದಗಿಸಿಕೊಟ್ಟು ಇಡೀ ರಾಜ್ಯದ ಸುದ್ದಿಯ ಕೇಂದ್ರ ಬಿಂದುವಾಗಿದ್ದರು. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗಾಗಿ ಕಿಟ್ ವಿತರಿಸಿ ಗಮನಸೆಳೆದಿದ್ದರು. ಹಳ್ಳಿಹೊಳೆ, ಅಮಾವಾಸ್ಯೆಬೈಲು ಸಹಿತ ಸಹಿತ ನಕ್ಸಲ್ ಪೀಡಿತ ಕುಗ್ರಾಮಗಳಲ್ಲೂ ಸುಮಾರು 6 ಸಾವಿರ ಅಸಹಾಯಕ ಕುಟುಂಬಗಳಿಗೆ ಅಗತ್ಯ ಕಿಟ್ ಸಹಿತ ನೆರವಿನ ಹಸ್ತ ಚಾಚಿದ್ದರು. ಈ ಕೈಂಕರ್ಯದಲ್ಲಿ ತೊಡಗಿದ್ದಾಗ ಬೈಂದೂರು ಸಮೀಪದ ಕೊಡೆರಿ ಗ್ರಾಮದ ಬಡ ಮಹಿಳೆ ರವಳಿ ನಾಗಮ್ಮ ಕಾರ್ವಿ ಅವರ ದುಸ್ಥಿತಿ ಕಂಡು ಗೋವಿಂದ ಬಾಬು ಪೂಜಾರಿ ಮಮ್ಮಲ ಮರುಗಿದರು.
ತೆಂಗಿನ ಗರಿಗಳಿಂದ ಕಟ್ಟಿದ ಗುಡಿಸಲಿನಲ್ಲಿ ನಾಗಮ್ಮ ವಾಸವಿದ್ದರು. ಈ ಮಹಿಳೆಯ ಕುಶಲೋಪರಿ ವಿಚಾರಿಸಿದ ಗೋವಿಂದ ಬಾಬು ಪೂಜಾರಿಯವರು, ಈ ಬಡಪಾಯಿ ಕುಟುಂಬದ ಕಷ್ಟಗಳನ್ನು ಬಗೆಹರಿಸುವ ಭರವಸೆ ನೀಡಿದರು. ಅದರಂತೆ ರವಳಿ ನಾಗಮ್ಮ ಕಾರ್ವಿ ಅವರಿಗೆ ಮನೆ ಕಟ್ಟಿಕೊಟ್ಟಿದ್ದಾರೆ. ತಮ್ಮ ಮನೆಯ ಪ್ರವೇಶ ಕೈಂಕರ್ಯ ನೆರವೇರಿಸುವ ರೀತಿಯಲ್ಲೇ ಈ ಮನೆಯ ‘ಗೃಹಪ್ರವೇಶ’ವನ್ನೂ ವೈದ್ಧಿಕ ಕಾರ್ಯಕ್ರಮಗಳೊಂದಿಗೆ ನೆರವೇರಿಸಿ ಮಾನವೀಯತೆಗೂ ಸಮರ್ಥ ಅರ್ಥವನ್ನು ತುಂಬಿದ್ದಾರೆ.
ಬಡಜನರ ನೆರವಿಗಾಗಿ, ಸಮಾಜಹಿತ ಕೆಲಸಕ್ಕಾಗಿ ತಾವೇ ಕಟ್ಟಿರುವ ‘ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಈ ಮನೆಯನ್ನು ಗೋವಿಂದ ಬಾಬು ಪೂಜಾರಿಯವರು ಕಟ್ಟಿಸಿ ಕೊಟ್ಟಿದ್ದಾರೆ. ಇದು ಈ ವರ್ಷದಲ್ಲಿ ಗೋವಿಂದ ಪೂಜಾರಿಯವರು ದಾನ ಮಾಡುತ್ತಿರುವ ಮೂರನೇ ಮನೆ. ಈ ಮನೆಗೆ’ ‘ಶ್ರೀ ವರಲಕ್ಷ್ಮೀ’ ಎಂದು ನಾಮಕರಣ ಮಾಡಿರುವುದು ವಿಶೇಷ.