ಬೆಂಗಳೂರು: ಉದ್ಯಾನ ನಗರಿಯಲ್ಲೊಂದು ವಿಶಿಷ್ಟ ಸಮಾರಂಭ.. ಗಣ್ಯಾತಿಗಣ್ಯರ ಸಮಾಗಮ.. ಅಲ್ಲಿ ಕುತೂಹಲದ ಕೇಂದ್ರಬಿಂದುವಾದದ್ದು ಸಾಮಾಜಿಕ ಹರಿಕಾರ ಡಾ.ಗೋವಿಂದ ಬಾಬು ಪೂಜಾರಿ.
ಕರಾವಳಿ ಮೂಲದ ಉದ್ಯಮಿ, ದೇಶದ ಪ್ರತಿಷ್ಠಿತ ಆಹಾರೋದ್ದಿಮೆ ಸಂಸ್ಥೆ ‘ChefTalk’ನ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಅವರು ಶೋಷಿತರ, ದೀನ-ದಲಿತರ ಸೇವೆಯನ್ನು ಭಗವಂತನ ಕೈಂಕರ್ಯ ಎಂಬಂತೆ ನಡೆಸುತ್ತಾ ಬಂದಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿದ್ದ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. ‘ಕಾರ್ಮಿಕ ರತ್ನ’ ಖ್ಯಾತಿಯ ಈ ಪೂಜಾರಿಗೆ ಬೆಂಗಳೂರಿನ ಪ್ರಮುಖ ಸಂಘಟನೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರೂ ಅದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ವಿದ್ಯಾವಾಚಸ್ಪತಿ ಸಂತೋಷ ಭಾರತಿ ಶ್ರೀ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಚಲನಚಿತ್ರ ನಟಿಯರಾದ ಶೃತಿ, ಹರ್ಷಿಕಾ ಪೂಣಚ್ಚ, ಅಸೋಸಿಯೇಷನ್ ಅಧ್ಯಕ್ಷರಾದ ಶ್ರಾವಣ್ ಲಕ್ಷಣ್ ಸಹಿತ ಗಣ್ಯಾತಿಗಣ್ಯರು ಈ ವೇಳೆ ಉಪಸ್ಥಿತರಿದ್ದರು.