ವಿಜಯಪುರ: ಕೊವಿಡ್ 19ಗೆ ರಾಮಬಾಣವಾಗಿರುವ ಲಸಿಕೆಯನ್ನು ಕಲಬುರಗಿ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯವಸ್ಥಿತವಾಗಿ ಹಾಕಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.
ವಿಜಯಪುರದಲ್ಲಿ ಕಲಬುರಗಿ ಜಿಲ್ಲಾಡಳಿತದೊಂದಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಅವರು, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತವಾಗಿ ಲಸಿಕೆಯನ್ನು ಪಡೆಯಲು ಮುಂದಾಗಬೇಕು. ಜಿಲ್ಲೆಯಲ್ಲಿ ಈವರೆಗೆ 23,969 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 22,422 ಮಂದಿಯು ಗುಣಮುಖರಾಗಿದ್ದು,ಡಿಸ್ಚಾರ್ಜ್ ಮಾಡಲಾಗಿದೆ. 1204 ಪ್ರಕರಣಗಳು ಸಕ್ರಿಯವಾಗಿದೆ. ಈವರೆಗೆ 86,423 ಜನರಿಗೆ ಲಸಿಕೆಯನ್ನು ಹಾಕಲಾಗಿದೆ. 7787 ಫ್ರಂಟ್ ಲೈನ್ ವರ್ಕರ್ ಗಳಿಗೆ ಲಸಿಕೆಯನ್ನು ಹಾಕಲಾಗಿದೆ. ಜಿಲ್ಲೆಗೆ 1,01,710 ಲಸಿಕೆಗಳು ಸ್ವೀಕಾರಗೊಂಡಿವೆ. ಲಸಿಕೆಗೆ ಕೊರತೆ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 21 ರಿಂದ 30 ಹಾಗೂ 31 ರಿಂದ 50 ವರ್ಷದೊಳಗಿನವರಿಗೆ ಅದರಲ್ಲೂ ಗಂಡು ಮಕ್ಕಳಲ್ಲಿ ಕೊವಿಡ್ ವೈರಾಣು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಕಾಂಟಾಕ್ಟ್ ಟ್ರೇಸಿಂಗ್ ಹಾಗೂ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಬೇಕು. ಕಾಂಟಾಕ್ಟ್ ಟ್ರೇಸಿಂಗ್ ನಲ್ಲಿ ಒಂದು ಪ್ರಕರಣಕ್ಕೆ ಕನಿಷ್ಟ 20 ಜನರನ್ನು ಪರೀಕ್ಷೆಗೊಳಪಡಿಸಬೇಕು. ಹೋಮ್ ಐಸೊಲೇಷನ್ ನಲ್ಲಿರುವವರು ಮಾರ್ಗ ಸೂಚಿ ಅನುಸರಿಸದಿದ್ದರೆ ಅವರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಅಂತರ್ ರಾಜ್ಯ ಗಡಿ ಪ್ರದೇಶದಲ್ಲಿ 5 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ದಿನದ 24 ಗಂಟೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಬೇಕು. ಜಿಲ್ಲಾಡಳಿತವೂ ಅನೇಕ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಲ್ಲರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.