ಗದಗ್: ಉತ್ತರ ಕರ್ನಾಟಕದಲ್ಲೂ ಆಕ್ಸಿಜನ್ ಕೊರತೆಯಿಂದ ಅವಾಂತರವೇ ಸೃಷ್ಟಿಯಾಗಿದೆ. ವೆಂಟಿಲೇಟರ್ ಸಿಗದೇ ಮೂವರು ಕೊರೋನಾ ಸೋಂಕಿತರು ಸಾವಿಗೀಡಾದ ದಾರುಣ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕೋವಿಡ್ ಸೋಂಕಿಗೊಳಗಾಗಿ ನಿನ್ನೆ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ನಾಲ್ವರು ಬಳಲುತ್ತಿದ್ದರು. ಈ ಪೈಕಿ ಇಂದು ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಸೋಂಕಿತರಿಗೆ ಆಕ್ಸಿಜನ್ ಸಂಬಂಧ ವೆಂಟಿಲೇಟರ್ ಗಾಗಿ ರೋಗಿಗಳ ಕುಟುಂಬಸ್ಥರು ಭಾನುವಾರ ಬೆಳಿಗ್ಗೆಯಿಂದಲೇ ಹುಡುಕಾಟ ನಡೆಸುತ್ತಿದ್ದರು. ಗದಗ ಜೀಮ್ಸ್ ಆಸ್ಪತ್ರೆ ಹಾಗೂ ಪಕ್ಕದ ಜಿಲ್ಲೆ ಕೊಪ್ಪಳ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸೌಕರ್ಯದ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದವು.
ತುರ್ತಾಗಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರ ಸಲಹೆಯಿತ್ತಾದರೂ ಪ್ರಯೋಜನವಾಗಿಲ್ಲ. ಎಷ್ಟೇ ಪ್ರಯತ್ನ ನಡೆಸಿದ್ರೂ ವೆಂಟಿಲೇಟರ್ ಸಿಗದೇ ರೋಗಿಗಳು ಮುಂಡರಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಮೃತರ ಬಂಧುಗಳು ಅಳಲು ತೋಡಿಕೊಂಡಿದ್ದಾರೆ.