ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳ ಕೊರತೆ ಇಲ್ಲ. ಆದರೆ ಅವುಗಳನ್ನು ಪಡೆದುಕೊಳ್ಳಲು ಅಗತ್ಯವಿರುವ ಕೌಶಲ್ಯ ಮತ್ತು ತಂತ್ರಜ್ಞಾನ ಪ್ರಜ್ಞೆಯ ಕೊರತೆಯಿದೆ ಎಂದು ಎಚ್.ಎಚ್.ಎಸ್ ಮತ್ತು ಎಚ್.ಎಂ.ಎಸ್ ಆಡಳಿತ ಸಮಿತಿಯ ಆಡಳಿತಾಧಿಕಾರಿ ಜಿ.ಎ. ಬಾವಾ ಅಭಿಪ್ರಾಯಪಟ್ಟರು.
ನಿವೃತ್ತ ಪೊಲೀಸ್ ಅಧೀಕ್ಷಕರೂ ಆದ ಜಿ.ಎ. ಬಾವಾ ಅವರು ಗುರುವಾರ ಬೆಂಗಳೂರಿನ ಕಬ್ಬನಪೇಟೆಯ ಎಚ್.ಎಚ್.ಎಸ್ ಮತ್ತು ಎಚ್.ಎಂ.ಎಸ್ ಐಟಿಐ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ನಮ್ಮ ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತಿದೆ. ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯಮಶೀಲರಾಗಿ ರೂಪುಗೊಳ್ಳಬೇಕಿದೆ ಎಂದರು. ತರಬೇತಿ ಪಡೆದ ವಿದ್ಯಾರ್ಥಿಗಳು ಉದ್ಯೋಗಮೇಳಗಳಲ್ಲಿ ಭಾಗವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ,” ಎಂದು ಅವರು ಹೇಳಿದರು.
ಸಲಹಾ ಸಮಿತಿಯ ಸದಸ್ಯ ಅಬ್ದುಲ್ ಅಝೀಮ್ ಮಾತನಾಡಿ, ಸಂಸ್ಥೆಯ ಅನುಭವ ಹಾಗೂ ಉದ್ಯೋಗ ಮೇಳಗಳ ಪರಿಣಾಮಕಾರಿತ್ವದ ಕುರಿತು ಮಾತನಾಡಿದರು. “ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶ್ರಮಿಸುತ್ತಿದ್ದು, ಅದರ ಫಲವೂ ಲಭ್ಯವಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳಾದ ಡಾ. ಇಕ್ಟಾಲ್ ಅಹ್ಮದ್, ಸೈಯದ್ ರಶೀದ್ ಅಹ್ಮದ್, ಯಾಕೂಬ್ ಯೂಸುಫ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನಾಸಿರ್ ಖಾನ್, ಮುಸಾದಿಕ್ ಮಹಿ, ಮೊಹಿಯುದ್ದೀನ್ ಅಹ್ಮದ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.