ದೆಹಲಿ: ತೀವ್ತ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪಾರುಪತ್ಯ ಮುಂದುವರಿಸುವ ಮುನ್ಸೂಚನೆ ಸಿಕ್ಕಿದೆ. ಚುನಾವಣಾ ಪೂರ್ವ ಸಮೀಕ್ಷೆಯಂತೆ ಉತ್ತರಪ್ರದೇಶದಲ್ಲಿ ಯೋಗಿ ಹವಾ ಬಿಜೆಪಿ ಸರ್ಕಾರ ಮರುಸ್ಥಾಪನೆಗೆ ವರದಾನದ ವಾತಾವರಣ ಕಲ್ಪಿಸಿದೆ.
ರಿಪಬ್ಲಿಕ್ ಟಿವಿ- ಪಿಎಂಎಆರ್‌ಕ್ಯೂ ಹಾಗೂ ಇಂಡಿಯಾ ಟಿವಿ- ಗ್ರೌಂಡ್ ಝೀರೋ ರಿಸರ್ಚ್ ತಂಡ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮರುಸ್ಥಾಪನೆಯ ಸುಳಿವು ಸಿಕ್ಕಿದೆ. ಉತ್ತರ ಪ್ರದೇಶ ಮಾತ್ರವಲ್ಲ ಉತ್ತರಖಂಡ್, ಮಣಿಪುರ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪೂರಕ ವಾತಾವರಣ ಇದೆ ಎಂಬ ಸಂಗತಿ ವ್ಯಕ್ತವಾಗಿದೆ.
ಚುನಾವಣೆ ಏರ್ಪಟ್ಟಿರುವ ಬಹುತೇಕ ರಾಜ್ಯಗಳಲ್ಲಿ ಕಳೆದ 2017ರಲ್ಲಿ ಗೆದ್ದಿದ್ದ ಬಹುತೇಕ ಸ್ಥಾನಗಳನ್ನು ಬಿಜೆಪಿ ಈ ಬಾರಿ ಕಳೆದುಕೊಳ್ಳಲಿದೆ ಎಂಬ ಕಹಿ ಸತ್ಯವೂ ಗೋಚರಿಸಿದೆ. ಈ ಬಾರಿಯ ಮಿನಿ ಮಹಾಸಮರದಲ್ಲಿ ಗೋವಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅತಂತ್ರ ಫಲಿತಾಂಶದ ಅಚ್ಚರಿ ಎದುರಾಗಲಿದೆಯಂತೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪರ ವಾತಾವರಣ ಇದ್ದು, ಕಾಂಗ್ರೆಸ್ ಕನಸು ಭಗ್ನವಾಗಲಿದೆ ಎಂಬುದೂ ಈ ಸಮೀಕ್ಷೆಯ ಹೈಲೈಟ್ಸ್..
ರಿಪಬ್ಲಿಕ್ ಟಿವಿ- ಪಿಎಂಎಆರ್‌ಕ್ಯೂ ಸಮೀಕ್ಷೆ
ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಉತ್ತಪ್ರದೇಶ, ಉತ್ತರಖಂಡ್, ಮಣಿಪುರ ರಾಜ್ಯಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.
ಉತ್ತರ ಪ್ರದೇಶ :
ಉತ್ತರಪ್ರದೇಶದಲ್ಲಿ 2017ರಲ್ಲಿ 312 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ 252 -272 ಸ್ಥಾನಗಳನ್ನು ಗೆಲ್ಲಲಿದೆ. ಸಮಾಜವಾದಿ ಪಕ್ಷ 111-131 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿದ್ದು, ಕಳೆದ ಬಾರಿಗಿಂತ ಈ ಬಾರಿ ಇದು ದುಪ್ಪಟ್ಟು ಸ್ಥಾನಗಳನ್ನು ಜಯಿಸಬಲ್ಲದು. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 8-16 ಸ್ಥಾನಗಳನ್ನು ಗೆಲ್ಲಬಹುದು.
ಉತ್ತರಖಂಡ:
ಉತ್ತರಖಂಡದಲ್ಲೂ 2017ರಲ್ಲಿ ಗೆದ್ದಿದ್ದ ಹಲವು ಸ್ಥಾನಗಳನ್ನು ಬಿಜೆಪಿ ಈ ಬಾರಿ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಆದರೂ ಬಿಜೆಪಿ 36-42 ಸ್ಥಾನಗಳನ್ನು ಗೆದ್ದು ಮರಳಿ ಗದ್ದುಗೆಗೇರಲಿದೆ. ಕಾಂಗ್ರೆಸ್ 25-31ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದು, ಆಮ್ ಆದ್ಮಿ ಪಕ್ಷವೂ 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.
ಮಣಿಪುರ:
ಮಣಿಪುರ ರಾಜ್ಯದಲ್ಲಿ ಬಿಜೆಪಿ 31-37 ಸ್ಥಾನಗಳೊಂದಿಗೆ ಅಧಿಕಾರಕ್ಕೇರುವ ಚಿತ್ರಣ ಇದೆ. ಕಾಂಗ್ರೆಸ್ ಪಾಲಿಗೆ 13-19 ಗೆಲುವು ಸಾಧ್ಯ. ಎನ್‌ಪಿಪಿ 3-9 ಹಾಗೂ ಎನ್‌ಪಿಎಫ್ 1-5 ಸ್ಥಾನಗಳನ್ನು ಜಯಿಸಬಹುದು.
ಗೋವಾ:
ಗೋವಾದಲ್ಲಿ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಕಷ್ಟ. ಸಮೀಕ್ಷೆ ಪ್ರಕಾರ ಬಿಜೆಪಿ 16-20 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 9-13 ಸ್ಥಾನಗಳನ್ನು ಪಡೆಯಬಹುದು. ಆಮ್ ಆದ್ಮಿ 4-8 ಸ್ಥಾನಗಳನ್ನು ಹಾಗೂ ತೃಣಮೂಲ ಕಾಂಗ್ರೆಸ್ 1-5 ಸ್ಥಾನಗಳನ್ನು ಹಂಚಿಕೊಳ್ಳಬಹುದು. 1-3 ಸ್ಥಾನಗಳು ಇತರರ ಪಾಲಗುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತಿದೆ ಸಮೀಕ್ಷೆ.
ಪಂಜಾಬ್:
ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವ ಆತಂಕ ಇದೆ. ಆಮ್ ಆದ್ಮಿ ಆತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು 50-60 ಸ್ಥಾನಗಳನ್ನು ಗೆಲ್ಲುವ ವಾತಾವರಣ ಇದೆ. ಕಾಂಗ್ರೆಸ್‌ಗೆ 42-48 ಸ್ಥಾನಗಳು ಸಿಗಬುದಾಗಿದ್ದು, ಅಕಾಲಿದಳ 13-17 ಸ್ಥಾನಗಳನ್ನು ಹಾಗೂ ಬಿಜೆಪಿ ಮೈತ್ರಿಕೂಟ 1-3 ಸ್ಥಾನಗಳನ್ನು ಹಂಚಿಕೊಳ್ಳುವ ರೀತಿ ಫಲಿತಾಂಶ ಬರುವ ಸಾಧ್ಯತೆಗಳೇ ಹೆಚ್ಚು.
ಇದೇ ವೇಳೆ, ಇಂಡಿಯಾ ಟಿವಿ- ಗ್ರೌಂಡ್ ಝೀರೋ ರಿಸರ್ಚ್ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ 230-235, ಸಮಾಜವಾದಿ ಪಕ್ಷ 160-165, ಕಾಂಗ್ರೆಸ್ 2-7, ಬಿಎಸ್‌ಪಿ 2-3, ಹಾಗೂ ಇತರರು 1-3 ಸ್ಥಾನಗಳನ್ನು ಹಂಚಿಕೊಳ್ಳುವ ಸಧ್ಯತೆಗಳಿವೆ.