ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಬದಲಾವಣೆಯ ಪರ್ವ ಆರಂಭವಾದಂತಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆ ಮೂಲಕ ರಾಜ್ಯ ಬಿಜೆಪಿಯಲ್ಲಿ ಭರ್ಜರಿ ವಿದ್ಯಮಾನಗಳು ಗರಿಗೆದರಿತ್ತು. ಇದೀಗ ಆ ವಿಚಾರದಲ್ಲಿ ಕಾಂಗ್ರೆಸ್ ಸರದಿ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರದೇಶ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಚರ್ಚೆಗಳು ಇತ್ತೀಚಿನ ದಿನಗಳಲ್ಲಿ ಜೋರಾಗಿ ಸಾಗಿದೆ. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಅವರ ಆಪ್ತರು ಆಗಾಗ್ಗೆ ಹೇಳಿಕೆ ನೀಡಿ ಕೈ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದ್ದಾರೆ. ಅದರ ಬೆನ್ನಲ್ಲೇ ದಲಿತ ಸಿಎಂ ಬಗ್ಗೆಯೂ ಚರ್ಚೆ ಆರಂಭವಾಗಿರುವುದು ಕುತೂಹಲಕಾರಿ ಬೆಳವಣಿಗೆ.
ಈ ನಡುವೆ, ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬುಲಾವ್ ನೀಡಿ ದೆಹಲಿಗೆ ಕರೆಸಿಕೊಂಡ ವಿದ್ಯಮಾನ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳಿಗೆ ರೋಚಕತೆ ತುಂಬಿದೆ. ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಅವರು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚಿಸಿದ್ದಾರೆಂದೂ, ರಾಜ್ಯದಲ್ಲಿನ್ನು ಏನಿದ್ದರೂ ಡಿಕೆಶಿ ಪರ್ವ ಎಂಬ ಮಾತುಗಳು ಕೆಪಿಸಿಸಿ ಮೊಗಸಾಲೆಯಲ್ಲಿ ಪ್ರತಿಧ್ವನಿಸಿದೆ.
ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಪಕ್ಷ ಸಂಘಟನೆ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಆ ವೇಳೆ ರಾಷ್ಟ್ರೀಯ ಮಟ್ಟದ ಜವಾಬ್ಧಾರಿ ವಹಿಸಿಕೊಂಡು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚಿಸಿದ್ದಾರೆಂಬ ಮಾತುಗಳೂ ಹರಿದಾಡುತ್ತಿವೆ. ಆದರೆ ಅಂತಹಾ ಬೆಳವಣಿಗೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಪ್ತರು ಹೇಳಿಕೊಂಡಿದ್ದಾರೆ.