ರಾಜ್ಯದ 150 ಐಟಿಐಗಳ ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚ.. ಎಂಜಿನಿಯರಿಂಗ್ ಸಂಶೋಧನೆ-ಅಭಿವೃದ್ಧಿ ನೀತಿ-2021ʼ ಲೋಕಾರ್ಪಣೆ
ಬೆಂಗಳೂರು: ಕೈಗಾರಿಕೆ ತರಬೇತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ರಾಜ್ಯದಲ್ಲಿನ 150 ಐಟಿಐ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು 5,000 ಕೋಟಿ ರೂ.ಗಳನ್ನು ರಾಜ್ಯ ಸರಕಾರ ವೆಚ್ಚ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ʼಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ʼಯನ್ನು ಲೋಕಾರ್ಪಣೆ ಮಾಡಿದ ಅವರು, ಕೇವಲ ಅಕೆಡಿಮಿಕ್ ಶಿಕ್ಷಣಕ್ಕೆ ಒತ್ತು ಕೊಡುವುದಲ್ಲ, ಕೈಗಾರಿಕೆ ಹಾಗೂ ಪ್ರಗತಿಗೆ ಪೂರಕವಾದ ಕೈಗಾರಿಕಾ ತರಬೇತಿ ಶಿಕ್ಷಣಕ್ಕೆ ಸರಕಾರ ಮಹತ್ವ ಕೊಡುತ್ತಿದೆ. ಆ ಮೂಲಕ ಕೈಗಾರಿಕೆಗಳಿಗೆ ಕುಶಲತೆಯುಳ್ಳ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿಯೇ ಒದಗಿಸುವುದು ಗುರಿಯಾಗಿದೆ. ಜ್ಞಾನ ಮತ್ತು ಕುಶಲತೆಯಷ್ಟೇ ನಮ್ಮ ಭವಿಷ್ಯವಾಗಿದೆ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಷ್ಟು ಮೊತ್ತದಷ್ಟು ಹಣವನ್ನು ಐಟಿಐ ಸಂಸ್ಥೆಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ ಎಂದರು.
ಒಂದೆಡೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ನ್ನು ರೂಪಿಸಿರುವ ಬೆನ್ನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿದೆ. ಈ ಮೂಲಕ ಇಡೀ ಶಿಕ್ಷಣ ವ್ವವಸ್ಥೆಯೇ ಆಮೂಲಾಗ್ರವಾಗಿ ಬದಲಾವಣೆ ಆಗಲಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಹೊಸ ಐಟಿಐ ಸಂಸ್ಥೆಗಳ ಸ್ಥಾಪನೆಯೂ ಸೇರಿದಂತೆ ಈಗಾಗಲೇ ಇರುವ ಎಲ್ಲ ಐಟಿಐಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಗುಣಮಟ್ಟದ ಬೋಧನೆ-ಕಲಿಕೆಯ ಉದ್ದೇಶವಿಟ್ಟುಕೊಂಡು ಈ ಪ್ರಯತ್ನ ಕೈಗೊಳ್ಳಲಾಗಿದೆ. ಭಾರತೀಯ ಕುಶಲತೆ ಮಾನದಂಡಕ್ಕೆ ತಕ್ಕಂತೆ ಇವೆಲ್ಲ ಮರುರೂಪ ಪಡೆಯಲಿವೆ. ಕೇವಲ ಶೈಕ್ಷಣಿಕ ಸಂಸ್ಥೆಗಳಾಗಿಯೇ ಇವು ಉಳಿದರೆ ಉದ್ಯಮ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದರು ಉಪ ಮುಖ್ಯಮಂತ್ರಿ.