ಅಮೆರಿಕದ ರಾಜಕೀಯ ವ್ಯವಸ್ಥೆ “ಏಕಪಕ್ಷೀಯ”ವಾಗಿದೆ ಎಂಬ ಗಂಭೀರ ಆರೋಪ ಹೇರಿದ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ‘ಅಮೆರಿಕ ಪಾರ್ಟಿ’ ಎಂಬ ಹೆಸರಿನಲ್ಲಿ ಈ ಹೊಸ ಪಕ್ಷವನ್ನು ಪ್ರಕಟಿಸಿರುವ ಮಸ್ಕ್, ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.
“ನೀವು ನಿಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಅಮೆರಿಕ ಪಕ್ಷವನ್ನು ರಚಿಸಲಾಗಿದೆ,” ಎಂದು ಮಸ್ಕ್ ಹೇಳಿದ್ದಾರೆ. ದೇಶದ ರಾಜಕೀಯದ ಪ್ರಸ್ತುತ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ಗಳ ನಡುವೆ ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ಭಿನ್ನತೆ ಇಲ್ಲ. ವಾಸ್ತವವಾಗಿ ಇಬ್ಬರೂ ಒಂದೇ ಪಕ್ಷದವರಂತೆ ನಡೆದುಕೊಳ್ಳುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನದಂದು ಅವರು ಎಕ್ಸ್ ನಲ್ಲಿ ಸಮೀಕ್ಷೆ ನಡೆಸಿ, “ನೀವು ಎರಡು ದೊಡ್ಡ ಪಕ್ಷಗಳಿಂದ ಸ್ವಾತಂತ್ರ್ಯ ಬಯಸುತ್ತೀರಾ? ನಾವು ಹೊಸ ಪಕ್ಷವನ್ನು ಸ್ಥಾಪಿಸಬೇಕಾ?” ಎಂದು ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದ್ದರು.
ಈ ಹಿಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಮಸ್ಕ್, ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ ಅನ್ನು ಟೀಕಿಸುತ್ತಾ, ಅದು ಮುಂದಿನ 10 ವರ್ಷಗಳಲ್ಲಿ ಅಮೆರಿಕದ ರಾಷ್ಟ್ರೀಯ ಸಾಲವನ್ನು 3.3 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸಬಹುದು ಎಂದು ಎಚ್ಚರಿಸಿದ್ದಾರೆ.