ದೆಹಲಿ/ಸ್ಟಾಕ್‌ಹೋಮ್: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ (ಅಂತರರಾಷ್ಟ್ರೀಯ ಐಡಿಇಎ)ಯ 2026ರ ಸದಸ್ಯ ರಾಷ್ಟ್ರಗಳ ಮಂಡಳಿಯ ಅಧ್ಯಕ್ಷರಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬುಧವಾರ ಪದಗ್ರಹಣ ಮಾಡಿದರು.
ಈ ಮೂಲಕ ಭಾರತದ ದೀರ್ಘ ಪ್ರಜಾಪ್ರಭುತ್ವ ಪರಂಪರೆ ಮತ್ತು ಪಾರದರ್ಶಕ ಚುನಾವಣಾ ನಿರ್ವಹಣೆಗೆ ಜಾಗತಿಕ ಮಾನ್ಯತೆ ದೊರೆತಿದೆ.
ಸ್ಟಾಕ್‌ಹೋಮ್‌ನಲ್ಲಿ ನಡೆದ ಸಭೆಯ ಬಳಿಕ ಸ್ವಿಟ್ಜರ್ಲೆಂಡ್‌ನಿಂದ ಭಾರತವು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು. ಸಮಾರಂಭದಲ್ಲಿ ಅವರನ್ನು ಸ್ವೀಡನ್‌ನ ಭಾರತೀಯ ರಾಯಭಾರಿ ಅನುರಾಗ್ ಭೂಷಣ್ ಸ್ವಾಗತಿಸಿದರು. ಬಳಿಕ ಅವರು ಐಡಿಇಎ ಪ್ರಧಾನ ಕಾರ್ಯದರ್ಶಿ ಡಾ. ಕೆವಿನ್ ಕಾಸಾಸ್–ಜಮೋರಾ ಅವರೊಂದಿಗೆ ಮಾತುಕತೆ ನಡೆಸಿದರು.
ಸದಸ್ಯ ರಾಷ್ಟ್ರಗಳು ಮತ್ತು ವೀಕ್ಷಕ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಸಿಇಸಿ ಜ್ಞಾನೇಶ್ ಕುಮಾರ್, “ಪ್ರಜಾಪ್ರಭುತ್ವದ ತಾಯಿ ಎಂದೆನಿಸಿರುವ ಭಾರತ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಮತದಾನ, ಪಾರದರ್ಶಕತೆ ಮತ್ತು ಚುನಾವಣಾ ನಿರ್ವಹಣೆಯಲ್ಲಿ 75 ವರ್ಷಗಳ ಅನುಭವ ಹೊಂದಿರುವ ಭಾರತದ ಚುನಾವಣಾ ಆಯೋಗ ಜಾಗತಿಕ ಮಾದರಿ” ಎಂದು ಹೇಳಿದರು.
ಭಾರತದ ಚುನಾವಣಾ ನಿರ್ವಹಣೆಯ ವಿಶಾಲತೆಯನ್ನು ವಿವರಿಸಿದ ಅವರು,
“ಲೋಕಸಭಾ ಚುನಾವಣೆಯ ವೇಳೆ ದೇಶದಾದ್ಯಂತ ಒಂದು ಮಿಲಿಯನ್‌ಗಿಂತ ಹೆಚ್ಚು ಸಿಬ್ಬಂದಿ ನಿಯೋಜನೆಗೊಳ್ಳುತ್ತಾರೆ. 900 ಮಿಲಿಯನ್‌ಗಿಂತ ಹೆಚ್ಚು ಮತದಾರರು ಭಾಗಿಯಾಗುವ ಈ ಪ್ರಕ್ರಿಯೆ ವಿಶ್ವದಲ್ಲಿ ಅನನ್ಯ” ಎಂದು ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾಗಿರುವುದು ಭಾರತೀಯ ಚುನಾವಣಾ ಸಂಸ್ಥೆಗಳ ಮೇಲೆ ಜಾಗತಿಕ ಸಮುದಾಯದ ವಿಶ್ವಾಸದ ಮುದ್ರೆ” ಎಂದರು.
ಮುಂದಿನ ವರ್ಷ ಭಾರತ ಮುನ್ನಡೆಸಲಿರುವ ಕ್ಷೇತ್ರಗಳು
“ಸದಸ್ಯ ರಾಷ್ಟ್ರಗಳೊಂದಿಗೆ ಸಹಕಾರ ಬೆಳೆಸುತ್ತಾ, ಜಾಗತಿಕವಾಗಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಪಾರದರ್ಶಕತೆ ಮತ್ತು ಬಲವರ್ಧನೆಗಾಗಿ ಭಾರತ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಭರವಸೆ ನೀಡಿದರು.
“ಭಾರತದ ಆಡಳಿತಾತ್ಮಕ ಅನುಭವ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂಸ್ಥೆಗಳ ಮೇಲಿನ ನಂಬಿಕೆ ನಮ್ಮ ಅಧ್ಯಕ್ಷತೆಯನ್ನು ಮಾರ್ಗದರ್ಶಿಸಲಿದೆ” ಎಂದು ಹೇಳಿದರು.

























































