ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಲಿದೆ. ಈ ಶಿಕ್ಷಣ ನೀತಿಯಡಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ, ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಿ, ವಿಶೇಷ ಕ್ರಿಯಾಯೋಜನೆಯನ್ನು ಸಿದ್ದಪಡಿಸುವಂತೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.
ವಿಧಾನಸೌಧದಲ್ಲಿಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳನ್ನು ಅವಲಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಲು ಈ ಶಿಕ್ಷಣ ನೀತಿಯಡಿ ಪರಿಣಾಮಕಾರಿ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ. ಈ ಎಲ್ಲಾ ವಿಪುಲ ಅವಕಾಶಗಳು ಈ ಸಮುದಾಯದ ವಿದ್ಯಾರ್ಥಿಗಳಿಗೆ ಸದ್ಬಳಕೆಯಾಗಿ, ಪರಿಣಾಮಕಾರಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಪಡೆದು ಸ್ವಾವಲಂಭಿಗಳಾಗುವಂತಹ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು. ಪರಿಶಿಷ್ಟ ಜಾತಿ- ಪಂಗಡ ಹಾಗೂ ಹಿಂದುಳಿದ ವರ್ಗಗಳು ಪ್ರಾತಿನಿದ್ಯ ಕಡಿಮೆ ಇರುವ ಗುಂಪು (ಯುಆರ್‍ಜಿ) ಗುಂಪಿನಲ್ಲಿ ಬರುವುದರಿಂದ ಸಂವಿಧಾನ ಆಶಯದಂತೆ ಈ ಸಮುದಾಯಗಳಿಗೆ ವಿಶೇಷ ಆದ್ಯತೆ ನೀಡಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಈ ನೀತಿಯಡಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ವಿಶೇಷ ಶೈಕ್ಷಣಿಕ ವಲಯ( ಎಸ್‍ಇಝಡ್) ರಚನೆ ಕುರಿತು ಪ್ರಸ್ತಾಪಿಸಲಾಗಿದೆ. ಇದರ ಜಾರಿಗೆ ಒತ್ತು ನೀಡಬೇಕಿದೆ. ಪರಿಶಿಷ್ಟ ಜಾತಿ -ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಶಿಕ್ಷಕ ವೃಂದಕ್ಕೆ ವೃತ್ತಿಪರ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಶಿಕ್ಷಕರ ಶಿಕ್ಷಣ ಹಾಗೂ ನೇಮಕಾತಿಗಾಗಿ ವಿಶೇಷ ಒತ್ತು ನೀಡಲಾಗಿದೆ. ಇದರ ಆಶಯವನ್ನು ರಾಜ್ಯದಲ್ಲಿ ಪರಿಣಾಮಕಾರಿ ಈಡೇರಿಸಬೇಕು. ಉನ್ನತ ಶಿಕ್ಷಣದಲ್ಲಿ ಮಲ್ಟಿಪಲ್ ಎಂಟ್ರಿ ಮತ್ತು ಮಲ್ಟಿಪಲ್ ಎಕ್ಸಿಟ್ ನಿಂದಾಗಿ ಶಾಲೆಯಿಂದ ಹೊರಗುಳಿಯುವವರ (ಡ್ರಾಪ್ ಔಟ್) ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಪರಿಶಿಷ್ಠ ಜಾತಿ ಮತ್ತು ಪಂಗಡ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವುದರಿಂದ ಅವರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಈ ನಿಟ್ಟಿನಲ್ಲಿ ವಿನಿಯೋಗಿಸುವ ಕುರಿತು ಸುಧೀರ್ಘವಾಗಿ ಚರ್ಚಿಸಿದರು.