ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಡಿನ ವಿವಿಧೆಡೆ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಲ್ಲೂ ಸ್ತ್ರೀ ಅರೋಗ್ಯ ಕುರಿತ ಕಾರ್ಯಕ್ರಮಗಳು ಗಮನಸೆಳೆಯುತ್ತಿವೆ. ಈ ಕುರಿತಂತೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಅವರು ಕೈಗೊಂಡಿರುವ ಅಭಿಯಾನದ ಸರಣಿ ಕುತೂಹಲದ ಕೇಂದ್ರಬಿಂದುವಾಗಿದೆ.
ಹಲವು ವರ್ಷಗಳಿಂದಲೂ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸ್ತ್ರೀಯರ ಅರೋಗ್ಯ ಕುರಿತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಡಾ.ಪದ್ಮಿನಿ ಪ್ರಸಾದ್, ಇದೀಗ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಹಮ್ಮಿಕೊಂಡಿರುವ ಸರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಕಾರ್ಯಕ್ರಮಗಳು ವನಿತೆಯರ ಪಾಲಿಗೆ ಸಂಜೀವಿನಿ ಸೂತ್ರವನ್ನು ಕೊಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
‘ಐಐಐಟಿ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ’ಯ ವಿದ್ಯಾರ್ಥಿಗಳಿಗಾಗಿ ‘ಅರೋಗ್ಯ ಜಾಗೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಡಾ. ಪದ್ಮಿನಿ ಪ್ರಸಾದ್ ಅವರು ವಿದ್ಯಾರ್ಥಿಗಳಲ್ಲಿ ದೇಹದ ಬೆಳವಣಿಗೆ, ದೈಹಿಕ, ಮಾನಸಿಕ ಮತ್ತು ಲೈಂಗಿಕ ಬೆಳವಣಿಗೆಗಳು, ಲೈಂಗಿಕ ಕಿರುಕುಳ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಕಾಯಿಲೆಗಳು ಸವಾಲಾಗಿವೆ. ಅದಕ್ಕೆ ನಮ್ಮ ಬದುಕಿನ ಶೈಲಿ ಕೂಡಾ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನರು ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬ ಬಗ್ಗೆ ಡಾ. ಪದ್ಮಿನಿ ಪ್ರಸಾದ್ ಅವರು ಸಲಹೆಗಳನ್ನು ನೀಡಿದರು.
ಸುದೀರ್ಘ ಹೊತ್ತು ನಡೆದ ಸಂವಾದದಲ್ಲಿ ಐಐಐಟಿ ವಿದ್ಯಾರ್ಥಿಗಳು ಹಲವಾರು ಕುತೂಹಲಕಾರಿ ಪ್ರಶ್ನೆಗಳನ್ನು ಮುಂದಿಟ್ಟರು. ಮಾಹಿತಿಯುಕ್ತ ಒಪ್ಪಿಗೆಯ ಪ್ರಾಮುಖ್ಯತೆ, ವಿವಾಹಪೂರ್ವ ಲೈಂಗಿಕ ಸಂಬಂಧಗಳ ಪರಿಣಾಮಗಳು, ಹೆಚ್ಚಿನ ಅಪಾಯ, ಲೈಂಗಿಕ ನಡವಳಿಕೆ ಬಗ್ಗೆ ತಿಳಿಹೇಳಿದ ಡಾ. ಪದ್ಮಿನಿ ಪ್ರಸಾದ್, ಲೈಂಗಿಕವಾಗಿ ಹರಡುವ ಸೋಂಕುಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಸಲಹೆ ನೀಡಿದರು.
ಪ್ರಸಕ್ತ ನಮ್ಮ ಬದುಕಿಗೆ ಕ್ಯಾನ್ಸರ್ ಸವಾಲಾಗಿದೆ. ಅದರಲ್ಲೂ ಗರ್ಭಕಂಠ ಕ್ಯಾನ್ಸರ್ ಮಹಿಳೆಯರನ್ನು ಆತಂಕಕ್ಕೀಡುಮಾಡಿದೆ. ಈ ಕಾಯಿಲೆ ಬಾರದಂತೆ ತಡೆಯಲು ಅವಕಾಶ ಇದೆ ಎಂದ ಅವರು, HPV ಲಸಿಕೆ ಅಭಿಯಾನವು ಸಂಭವನೀಯ ಅನಾಹುತವನ್ನು ತಡೆಯಬಹುದು ಎಂದು ಪ್ರತಿಪಾದಿಸಿದರು.
ಇದೇ ವೇಳೆ, HPV ಲಸಿಕೆಯ ಮಹತ್ವ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ವಿಧಾನ, ಲಿಂಗ ಸಂವೇದನೆ ಮತ್ತು ಲಿಂಗ ಗುರುತಿಸುವಿಕೆ ಕುರಿತು ಮಹತ್ವದ ಸಂಗತಿಗಳನ್ನು ಡಾ. ಪದ್ಮಿನಿ ಪ್ರಸಾದ್ ಅವರು ಐಐಐಟಿ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.






















































