ದೊಡ್ಡಬಳ್ಳಾಪುರ: ನಗರದಲ್ಲಿ ಸರಗಳ್ಳತನ, ಹಗಲು ದರೋಡೆ, ಬೆದರಿಕೆ, ಕೊಲೆ ಸೇರಿದಂತೆ ಇತರೆ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ನೇತೃತ್ವದಲ್ಲಿ ನಗರದ ಮುತ್ಯಾಲಮ್ಮ ದೇವಾಲಯದ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಇತ್ತೀಚಿಗೆ ದೊಡ್ಡಬಳ್ಳಾಪುರ ನಗರ ಭಾಗದಲ್ಲಿ ಅತೀ ಹೆಚ್ಚಾಗಿ ಹಾಡಹಗಲೇ ಒಂಟಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ಮಹಿಳೆಯರ ಬಳಿ ಚಿನ್ನದ ಸರ ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಕದ್ದು ಪರಾರಿಯಾಗುತ್ತಿದ್ದಾರೆ. ತಮ್ಮ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಅವರ ದೂರಿನ್ವಯ ಕಳ್ಳರ ಉಪಟಳ ಮಟ್ಟಹಾಕಲು ಪೊಲೀಸರು ತಮ್ಮ ಕಾರ್ಯವನ್ನು ನಿಭಾಯಿಸುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ ಎಂದರು.
ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಯಲು ಅಧಿಕಾರಿಗಳನ್ನು ಸಜ್ಜುಗೊಳಿಸಲಾಗಿದೆ ಎಂದ ಅವರು, ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದರು. ತಮ್ಮ ಇಲಾಖೆಯ ಕಾರ್ಯಚರಣೆಯ ಜೊತೆ ಸಾರ್ವಜನಿಕರೊಂದಿಗೂ ಕಾರ್ಯತಂತ್ರ ಆಗಬೇಕಿದೆ. ಹಾಗಾಗಿ ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕಿದೆ ಎಂದವರು ಪ್ರತಿಪಾದಿಸಿದರು.
ಕಳ್ಳರನ್ನು ಮಟ್ಟಹಾಕಲು ಪೊಲೀಸರು ಜೊತೆ ಸಾರ್ವಜನಿಕರು ಸಹ ಸಹಕರಿಸಿದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬಹುದು. ಯಾವುದೇ ಕಳ್ಳತನ ಮತ್ತಿತರ ಕಾನೂನು ಬಾಹಿರ ಘಟನೆಗಳು ನಡೆದರೆ ತಕ್ಷಣವೇ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಬೇಕು. ಮನೆಯಿಂದ ಹೊರ ಬಂದಾಗ ಅಕ್ಕಪಕ್ಕದಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ನಡವಳಿಕೆ ತೋರುತ್ತಿರುವುದು ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಎಎಸ್ಪಿ ಪುರುಷೋತ್ತಮ್ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತಾಲೂಕಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಇದ್ದು ಯಾರೂ ಹಿಂಜರಿಯದೆ, ಭಯಪಡದೇ ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದರೆ, ಕೂಡಲೇ ಸೂಕ್ತ ತನಿಖೆಯಿಂದ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಲು ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಶೀಘ್ರದಲ್ಲೇ ಕಾನೂನು ವ್ಯಾಪ್ತಿಯಲ್ಲಿ ಇತ್ಯರ್ಥಪಡಿಸುವ ಭರವಸೆ ನೀಡಲಾಯಿತು. ಈ ವೇಳೆ ಡಿವೈಎಸ್ ಪಿ ನಾಗರಾಜು, ಇನ್ಸ್‌ಪೆಕ್ಟರ್ ಪ್ರೀತಮ್, ಹರೀಶ್ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.