ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರು ಹೊರವಲಯದ ಪ್ರಸಿದ್ಧ ಮದುರೆ ಶನಿಮಹಾತ್ಮ ದೇವರ 66ನೇ ವರ್ಷದ ಬ್ರಹ್ಮರತೋತ್ಸವ ಮಂಗಳವಾರ ನೆರವೇರಿತು. ಬೆಳಗ್ಗೆಯಿಂದ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪೂಜಾ ಕಾಂಕರ್ಯಗಳನ್ನು ಮಾಡಿ ಶನಿಮಹಾತ್ಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜತೆಗೆ ಯಾಗ, ಹೋಮ ಹವನಗಳನ್ನು ದೇವಾಲಯದ ಬಳಿ ನೆರವೇರಿಸಿ ಮದ್ಯಾಹ್ನ1.30ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾಧಿಗಳು ಬಾಳೆ ಹಣ್ಣಿಗೆ ದವನ ಚುಚ್ಚಿ ರಥಕ್ಕೆ ಎಸೆದು ಸಂಭ್ರಮಿಸಿದರು.
ದೇವರ ದರ್ಶನಕ್ಕೆ ಬಂದ ಭಕ್ತಾಧಿಗಳಿಗೆಲ್ಲಾ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಮುಂದೆ ಅಕ್ಕಪಕ್ಕದ ಗ್ರಾಮಗಳಿಂದ ಪಾನಕ, ಕೋಸಂಬರಿ ಮಾಡಿಕೊಂಡು ಬಂದು ಭಕ್ತಾಧಿಗಳಿಗೆ ಹಂಚುತ್ತಿದ್ದ ದೃಶ್ಯ ಗಮನಸೆಳೆಯಿತು. ಬ್ರಹ್ಮ ರಥೋತ್ಸವ ಅಂಗವಾಗಿ ಮಾ.23ರಿಂದ 29ರವರೆಗೂ ವಿವಿಧ ಧಾರ್ಮಿಕ ಕಾರ್ಯಗಳು, ಪೌರಾಣಿಕ ನಾಟಕಗಳನ್ನು ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ನಗರದಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸಿದ್ದರು.
ಈ ವೇಳೆಯಲ್ಲಿ ಮಾತನಾಡಿದ ದೇವಾಲಯದ ಧರ್ಮಾಧಿಕಾರಿ ಕೆ ಪ್ರಕಾಶ್, ದೇವಾಲಯದ ಬಳಿ ಕೋವಿಡ್ ನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ನಾವು ಕಡಿಮೆ ಜನರು ಬರುವ ನಿರೀಕ್ಷೆಯಿಟ್ಟುಕೊಂಡಿದ್ದೆವು. ಯಾವುದೇ ಪ್ರಚಾರ ಕಾರ್ಯಗಳನ್ನು ಮಾಡಿರಲಿಲ್ಲ. ಆದರೂ ಇಷ್ಟೊಂದು ಮಂದಿ ಬಂದು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದು ಖುಷಿಯ ವಿಷಯವಾಗಿದೆ ಎಂದರು.