ಬೆಂಗಳೂರು: ದೊಡ್ಡಬಳ್ಳಾಫುರ ನಗರ ಹಾಗೂ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ಮೆಡಿಕಲ್ ಸ್ಟೊರ್, ಕ್ಲಿನಿಕ್ ನರ್ಸಿಂಗ್ ಹೋಂಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ನಗರದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಮಾಡಲಾಯಿತು.
ಬಹುತೇಕ ಕಡೆ ನಾಯಿಕೊಡೆಗಳಂತೆ ನರ್ಸಿಂಗ್ ಹೋಂ, ಕ್ಲಿನಿಕ್‌ಗಳು, ಮೆಡಿಕಲ್ ಸ್ಟೋರ್‌ಗಳು ತಲೆ ಎತ್ತಿವೆ. ಜತೆಗೆ, ನರ್ಸಿಂಗ್ ಹೋಂಗಳಲ್ಲಿ ನಕಲಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡು ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಡಿಫಾರ್ಮ್ ಪಡೆಯದೇ ಕೆಲವರು ಮೆಡಿಕಲ್ ಸ್ಟೋರ್‌ಗಳನ್ನು ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.
ಹತ್ತಾರು ಮೆಡಿಕಲ್ ಸ್ಟೋರ್‌ಗಳು ಹಾಗೂ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆ. ಕೆಪಿಎಂಇ ಕಾಯಿದೆಯನ್ನೂ ಉಲ್ಲಂಘಿಸಿ ಅನಧಿಕೃತವಾಗಿ ನಡೆಸಲಾಗುತ್ತಿದ್ದಲ್ಲದೆ, ಗರ್ಭನಿರೋಧಕ ಮಾತ್ರೆಗಳು, ಸ್ಟಿರಾಯಿಡ್, ನೋವು ನಿವಾರಗಳನ್ನು ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಔಷಧ ನಿಯಂತ್ರಕರು ಹಾಗೂ ಇತರೆ ಸಕ್ಷಮ ಪ್ರಾಧಿಕಾರಗಳು ಯಾವುದೇ ಕ್ರಮ ಜರುಗಿಸದೇ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿಕುಮಾರ್ ಮಾತನಾಡಿ ನಗರದಲ್ಲಿ ನಡೆಯುತ್ತಿರುವ ನರ್ಸಿಂಗ್ ಹೋಂ, ಕ್ಲಿನಿಕ್, ಮೆಡಿಕಲ್ ಸ್ಟೋರ್‌ಗಳ ಅಕ್ರಮಗಳು ಅವ್ಯಾಹತವಾಗಿ ಮುಂದುವರಿಯುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದರ ಹಿಂದಿನ ಉದ್ದೇಶಗಳೇನು ಎಂದು ಪ್ರಶ್ನಿಸಿದರು.
ನಕಲಿ ಸರ್ಟಿಫಿಕೇಟ್ ಪಡೆದು ನಡೆಯುತ್ತಿರುವ ಮೆಡಿಕಲ್ ದಂಧೆಗೆ ಅಧಿಕಾರಿಗಳ ಕುಮ್ಮಕ್ಕು ಇದೆಯೇ ಅದನ್ನಾದರೂ ತಿಳಿಸಿ ಎಂದು ಅಸಮಾಧಾನ ಹೊರಹಾಕಿದರು.ಅನಧಿಕೃತವಾಗಿ ತೆರೆದಿರುವ ಮೆಡಿಕಲ್ ಸ್ಟೊರ್ ಗಳ ಪಕ್ಕದಲ್ಲಿ ಇವರೆ ಡಾಕ್ಟರ್ ಗಳನ್ನು ತಂದಿಟ್ಟು ಸಾಮನ್ಯ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳು ಈ ಅಕ್ರಮ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಪ್ರತಿಭಟನೆ ಮಾಾಡುವುದಾಗಿ ಎಚ್ಚರಿಕೆ ನೀಡಿದರು.