ಬೆಂಗಳೂರು: ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಮತ್ತು ಬೆಲೆ ಏರಿಕೆ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರದಲ್ಲಿ ಇಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ರಸ್ತೆ ಗಳಲ್ಲಿ ರ್ಯಾಲಿ ನಡೆಸಿದ ನೂರಾರುಮಂದಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿ, 20ನೇ ತಾರೀಖುವರೆಗೂ 9 ತಂಡಗಳು ರಾಜ್ಯಾದ್ಯಂತ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡ್ತಿವೆ. ಸರ್ಕಾರದಲ್ಲಿ 40% ಕಮಿಷನ್ ಭ್ರಷ್ಟಾಚಾರ ತಾಂಡವವಾಡ್ತಿದೆ. ಕೆಂಪಣ್ಣ ಮೋದಿಗೆ ಪತ್ರ ಬರೆದಾಗ ಕ್ರಮ ತೆಗೆದುಕೊಳ್ತಾರೆ ಅಂದುಕೊಂಡಿದ್ವಿ, ಆದ್ರೆ ಅದು ಆಗಲಿಲ್ಲ.ಚೈಕಿದಾರ್ ಎಂದು ಹೇಳಿಕೊಳ್ಳುವ ಮೋದಿ ನಾನೂ ತಿನ್ನಲ್ಲ, ತಿನ್ನೋಕು ಬಿಡಲ್ಲ ಅಂದಿದ್ದು ಬರೀ ಬೊಗಳೆ ಮಾತಾಗಿಯೇ ಉಳಿದಿದೆ ಎಂದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟಿಲ್ ಕಮಿಷನ್ ದಂದೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗೈಹುಣ್ಣಿಗೆ ಕನ್ನಡಿಬೇಕಿಲ್ಲ, ಸರ್ಕಾರದ ಕಮೀಷನ್ ಆಡಳಿತ ಜನರ ಕಣ್ಣ ಮುಂದಿದೆ. ನಮ್ಮ ಬೇಡಿಕೆ ಈಶ್ವರಪ್ಪ ರಾಜಿನಾಮೇ ಮಾತ್ರವಲ್ಲ, ಅವರ ಮೇಲೆ ಭ್ರಷ್ಟಾಚಾರ ಕೇಸ್ ಹಾಕಬೇಕು ಬಂಧನ ಮಾಡಬೇಕು, ಹೈಕೋರ್ಟ್ ಜಡ್ಜಗಳಿಂದ ತನಿಖೆ ನಡೆಸಬೇಕು, ಸಂತೋಷ್ ಪಾಟಿಲ್ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಈ ಬ್ರಷ್ಠ ಸರ್ಕಾರ ಮಠಕ್ಕೆ ಹಣ ಕೊಟ್ಟಿದಕ್ಕೂ 30 ಪರ್ಸೆಂಟ್ ಕಮಿಷನ್ ಪಡೆದುಕೊಂಡಿದೆ, ಕಮಿಷನ್ ಲಿಸ್ಟ್ ನಲ್ಲಿ ಇನ್ನೂ ಕೆಲ ಸಚಿವರಿದ್ದಾರೆ ಅದನ್ನು ರಿಲೀಸ್ ಮಾಡ್ತೀವಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರಾದ ರವಿ, ವೆಂಕಟರಮಣಯ್ಯ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.