ದೊಡ್ಡಬಳ್ಳಾಪುರ: ವಿಧವೆಯರಿಗೆ ಹಣ ಕೊಡಿಸುವ ಸೋಗಿನಲ್ಲಿ ವಂಚಕ ಸುಮಾರು 62 ವರ್ಷದ ಒಂಟಿ ವೃದ್ಧೆಯನ್ನು ಬಲೆಗೆ ಬೀಳಿಸಿ ಚಿನ್ನದ ಸರ ಎಗರಿಸಿ ಎಸ್ಕೇಪ್ ಆಗಿದ್ದಾನೆ.
ವಿವೇಕಾನಂದ ನಗರದಲ್ಲಿ ಘಟನೆ ನಡೆದಿದೆ. ವೃದ್ಧೆ ಸುಬ್ಬಲಕ್ಷಮ್ಮ ವಂಚಕನ ಮೋಸದ ಜಾಲಕ್ಕೆ ಸಿಲುಕಿ 20 ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ, ಜೀವನದ ಕಷ್ಟಕಾಲದಲ್ಲಿ ಗಂಡನ ದುಡಿಮೆ ಹಣದಿಂದ ಸಂಪಾದಿಸಿದ ಚಿನ್ನದ ಸರವನ್ನ ಕಳೆದುಕೊಂಡಿದ್ದಕ್ಕೆ ಕಣ್ಣಿರೀಟ್ಟಿದ್ದಾರೆ.
ತನ್ನ ಗಂಡನನ್ನು ವರ್ಷದ ಹಿಂದೆ ಕಳೆದುಕೊಂಡು ವಿವೇಕಾನಂದ ನಗರದಲ್ಲಿ ವಾಸವಿರುವ ಸುಬ್ಬಲಕ್ಷಮ್ಮ ಮೇ.11 ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆ ಸಮೀಪದ ಅಂಜನೇಯ ದೇವಸ್ಥಾನ ಬಳಿ ಒಂಟಿಯಾಗಿ ಕುಳಿತಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೋರ್ವ ಮೋಟಾರ್ ಸೈಕಲ್‌ನಲ್ಲಿ ದೇವಸ್ಥಾನ ಬಳಿ ಬಂದು ದೇವರಿಗೆ ನಮಸ್ಕರಿಸಿ, ಅಜ್ಜಿಯ ಬಳಿ ನಯವಾದ ಮತಗಳನ್ನಾಡಿ, ಗಂಡ ಸತ್ತವರಿಗೆ, ಕಣ್ಣು ಕಾಣದವರಿಗೆ ತಾಲೂಕು ಕಚೇರಿಯಲ್ಲಿ 10 ಸಾವಿರ ಹಣ ಕೊಡುತ್ತಿದ್ದಾರೆಂದು ಹೇಳಿದ್ದಾನೆ.
ವಂಚಕನ ಮಾತಿಗೆ ಮರುಳಾದ ಈ ವೃದ್ದೆ ಆತನನ್ನು ಸಂಪೂರ್ಣ ನಂಬಿ, ವಂಚಕ ಹೇಳಿದ ಹಾಗೆ ಮಾಡಿದ್ದಾರೆ. ಮೋಟರ್ ಸೈಕಲ್‌ನಲ್ಲಿ ಕರೆದುಕೊಂಡು ನಗರವನ್ನೆಲ್ಲಾ ಸುತ್ತಿಸಿ ಕೊನೆಗೆ ನಗರದ ಸೌಂದರ್ಯ ಮಹಲ್ ಬಳಿ ನಿಲ್ಲಿಸಿ, ಚಿನ್ನದ ಒಡವೆ ಇದ್ದರೆ ಅಧಿಕಾರಿಗಳು ಹಣ ಕೊಡುವುದಿಲ್ಲ ಎಂದು ಹೇಳಿದ ಆತ ಚಿನ್ನದ ಸರ ಮತ್ತು ಮೊಬೈಲ್ ಅನ್ನು ಸ್ಕೂಟರ್ ಡಿಕ್ಕಿಯಲ್ಲಿ ಹಾಕಿಸಿದ್ದಾನೆ. ಬಳಿಕ ವೃದ್ದೆಯ ಕೈಗೆ 200 ರೂಪಾಯಿ ಕೊಟ್ಟ ವಂಚಕ ಜೆರಾಕ್ಸ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ.
ವಂಚಕ ಬರುವುದನ್ನೇ ಕಾಯುತ್ತಿದ್ದ ವೃದ್ಧೆ ಆತ ಬಾರದೆ ಹೋದಾಗ ಗಲಿಬಿಲಿಗೊಂಡು ಕಣ್ಣೀರಿಟ್ಟು ಅಲ್ಲಿಂದ ನಡೆದುಕೊಂಡು ತಮ್ಮನ ಮಗನ ಮನೆಗೆ ಬಂದು ನಡೆದ ಮೋಸದ ಜಾಲದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.























































