ದೊಡ್ಡಬಳ್ಳಾಪುರ: ಹೋಟೆಲ್ ವ್ಯವಹಾರಕ್ಕಾಗಿ ದೊಡ್ಡಬಳ್ಳಾಪುರ ಬಳಿಯ ಡಿ.ಕ್ರಾಸ್‌ನಲ್ಲಿರುವ ಸತೀಶ್ ಎಂಬುವರು ಕಳೆದ ನಾಲ್ಕು ವರ್ಷಗಳ ಹಿಂದೆ ಮನೆ ಅಡವಿಟ್ಟು ಸಾಲ ಮಾಡಿದ್ದರು. ಕೊರೊನಾ ಪರಿಸ್ಥಿತಿಯಿಂದಾಗಿ ವ್ಯಾಪಾರದಲ್ಲಿ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಜಮೆಯಾಗದ ಹಿನ್ನಲೆ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ. ಬ್ಯಾಂಕ್ ನವರ ನಿರ್ದಾಕ್ಷಿಣ್ಯ ಕ್ರಮದಿಂದ 12 ಜನರ ದೊಡ್ಡ ಕುಟುಂಬ ಬೀದಿಗೆ ಬಂದಿದೆ.
ಏನಿದು ಪ್ರಕರಣ?
ಕುಟುಂಬದ ಮುಖ್ಯಸ್ಥ ಸತೀಶ್, ಮಿಲ್ಟ್ರೀ ಹೊಟೇಲ್ ನಡೆಸುತ್ತಿದ್ದರು. ಮಿಲ್ಟ್ರಿ ಹೊಟೇಲ್ ವ್ಯವಹಾರ ನಂಬಿ ಬೆಂಗಳೂರಿನ ವಾಸು ಹೌಸಿಂಗ್ ಫೈನಾನ್ಸ್ ನಲ್ಲಿ ೧೦ ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಕೊರೊನಾ ಬಳಿಕ ಹೋಟೆಲ್ ವ್ಯಾಪಾರ ಸಂಪೂರ್ಣ ಹಿನ್ನಡೆಯಾಗಿದೆ. ಈವರೆಗೆ ವ್ಯಾಪಾರ ಚೇತರಿಕೆಯಾಗಿಲ್ಲ, ಸಾಧ್ಯವಾದ ಮಟ್ಟಿಗೆ ಸಾಲವನ್ನು ಕಟ್ಟಿದ್ದೇವೆ. ನಮ್ಮ ಕಷ್ಟವನ್ನು ಅರಿಹದ ಬ್ಯಾಂಕ್ ಸಿಬ್ಬಂದಿ ಕೋರ್ಟ್ ಆದೇಶದೊಂದಿಗೆ ಬಂದ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ ಎಂದು ಈ ಕುಟುಂಬ ಅಳಲು ತೋಡಕೊಂಡಿದೆ.
ಈ ಬಗ್ಗೆ ಸತೀಶ್ ಪತ್ನಿ ಮೀನಾಕ್ಷಿ ಮಾತನಾಡಿ ನಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾವೆ. ಬ್ಯಾಂಕ್ ಸಿಬ್ಬಂದಿ, ಪೊಲೀಸರನ್ನು ಎಷ್ಟೇ ಬೇಡಿಕೊಂಡರು ಕೇಳುತ್ತಿಲ್ಲ. ನಮ್ಮ ಯಜಮಾನರ ಮೇಲೆ ಕೇಸ್ ಆಗಿತ್ತು. ಹೀಗಾಗಿ ಸಮಸ್ಯೆ ಆಗಿದೆ. ಪ್ರತಿ ತಿಂಗಳು 10 ಸಾವಿರ ಕಟ್ಟುತ್ತಾ ಬಂದಿದ್ದೇವೆ. ಕಟ್ಟಿದ ದುಡ್ಡಿಗೂ ಬಡ್ಡಿಯನ್ನು ಕಟ್ಟಿಸಿಕೊಂಡರೆ ಹೇಗೆ ಹಣ ಕಟ್ಟಲು ಮನಸ್ಸು ಬರುತ್ತೆ? ಒಂದು ವಾರ ಸಮಯವನ್ನು ಕೊಡಿ ಎಂದು ಕೇಳಿಕೊಂಡೆವು. ಬ್ಯಾಂಕ್ನಿಂದ 10 ಲಕ್ಷವನ್ನು ತೆಗೆದುಕೊಂಡಿದ್ದೇವೆ. ನಮ್ಮ ಪತಿ ಹೋಟೆಲ್ ನಡೆಸುವಾಗ ಸ್ವಲ್ಪ ಕಟ್ಟಿದ್ದಾರೆ. ಸ್ವಲ್ಪ ಹಣವನ್ನು ನಮ್ಮ ಭಾವ ಕಟ್ಟಿದ್ದರು. ಈಗ ಕೇಳಿದ್ರೆ ಅವರು ನೀವು ಕಟ್ಟಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ, ಸ್ಲಿಪ್ ಕೇಳಿದ್ರೆ ಅದನ್ನೂ ಕೂಡಾ ಅವರು ಕೊಡುತ್ತಿಲ್ಲ. ಇವತ್ತು ಬಂದು ಮನೆ ಸೀಜ್ ಮಾಡಿಕೊಂಡು ಹೋಗಿದ್ದಾರೆ. ನಮಗೆ ಊಟ ತಿನ್ನಲು ಕೂಡಾ ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಹಣದ ಮುಂದೆ ಮಾನವೀಯತೆಗೆ ಬೆಲೆ ಕೊಡದ ಬ್ಯಾಂಕ್ ನವರು ಮನೆಗೆ ಬೀಗ ಹಾಕಿದ್ದಾರೆ. ಆಶ್ರಯ ಕಳೆದುಕೊಂಡ ಮನೆಯ ಸದಸ್ಯರಿಗೆ ಈಗ ಮನೆಯ ಮುಂಭಾಗದ ರಸ್ತೆಯೇ ಆಶ್ರಯ ತಾಣವಾಗಿದೆ. ನೀರನ್ನು ಸಹ ಪಕ್ಕದ ಮನೆಯವರನ್ನ ಕೇಳಿಬೇಕಾದ ಪರಿಸ್ಥಿತಿ, ಹಸಿದ ಮಕ್ಕಳಿಗೆ ಏನು ಕೋಡಬೇಕೆಂಬುದು ತಿಳಿಯದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಔಷದೋಪಚಾರ ಮಾಡಲಾಗದ ಸಂಕಷ್ಟ ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಕೈತೊಳೆಯವಂತೆ ಮಾಡಿದೆ.
























































