ದೊಡ್ಡಬಳ್ಳಾಪುರ: ‘ಕಮಲ ಕೆರೆಗೆ ಚೆಂದ, ತೆನೆ ಹೊಲಕ್ಕೆ ಚೆಂದ, ಕೈ ಅಧಿಕಾರಕ್ಕೆ ಚೆಂದ’ ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಪರ ರೋಡ್‌ಶೋ ನಡೆಸಿದ ಅವರು, ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಆಡಳಿತಕ್ಕೆ ಜನರೆಲ್ಲಾ ಬೇಸತ್ತಿದ್ದಾರೆ. 40% ಲಂಚ, ಎಲ್ಲಾ ಉದ್ಯೋಗ ನೇಮಕಾತಿಗಳಲ್ಲೂ ಅಕ್ರಮ, ಜಾತಿ ಸಮುದಾಯಗಳ ನಡುವೆ ಕೋಮು ದ್ವೇಷ ಸೇರಿದಂತೆ ಜನಸಾಮಾನ್ಯರಿಗೆ ಬೆಲೆ ಏರಿಕೆ: ಬಿಸಿಯನ್ನು ಬಿಜೆಪಿ ನೀಡುತ್ತ ಬಂದಿದೆ. ಹೀಗಾಗಿ, ರಾಜ್ಯದಿಂದ ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲರೂ ಸಹಕರಿಸಬೇಕಿದೆ. ಮತದಾರರು ನಿರ್ಧಾರ ಮಾಡಿದರೆ ಇದು ಸಾಧ್ಯವಾಗಲಿದೆ. ಈ ಬಾರಿ ಎಲ್ಲರೂ ಕಾಂಗ್ರೆಸ್‌ಗೆ ಬಲ ನೀಡುವ ಕೆಲಸ
ಮಾಡಬೇಕಿದ್ದು, ದೊಡ್ಡಬಳ್ಳಾಪುರದಲ್ಲಿ ಟಿ.ವೆಂಕಟ ರಮಣಯ್ಯರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕಿದೆ ಎಂದರು.
ಹೆಲಿಕಾಪ್ಟರ್‌ನಲ್ಲಿ ತೆರಳುವ ವೇಳೆ ಹದ್ದು ಡಿಕ್ಕಿಯೊಡೆದ ಹಿನ್ನೆಲೆ ಗಾಜು ಹೊಡೆದು ತುಂಬಿಕೊಂಡಿತ್ತು. ನಾನಿವತ್ತು ಇರ್ತೀನೋ ಇಲ್ಲೋ
ಗೊತ್ತಿರ್ಲಿಲ್ಲ, ದೇವರ ಆಶೀರ್ವಾದ, ನಿಮ್ಮ ಆಶೀರ್ವಾದಿಂದ ಬದುಕಿ ವಾಪಸ್ಸು ಬಂದಿದ್ದೇನೆ. ದೇವನಹಳ್ಳಿಯಲ್ಲಿ ಕೆ.ಎಚ್. ಮುನಿಯಪ್ಪರನ್ನು ದೊಡ್ಡಬಳ್ಳಾಪುರದಲ್ಲಿ ಟಿ.ವೆಂಕಟರಮಣಯ್ಯರನ್ನು ಗೆಲ್ಲಿಸುವ ಹೊಣೆ ಪ್ರತಿಯೊಬ್ಬ ಮತದಾರರ ಮೇಲಿದೆ ಎಂದವರು ಹೇಳಿದರು.
ನಾವು ಸಮಿಶ್ರ ಸರಕಾರ ನಡೆಸಿದೆವು. ಜೆಡಿಎಸ್ ನ ಕುಮಾರಣ್ಣನಿಗೆ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ದಳದವರಿಗೆ ಅಧಿಕಾರವನ್ನು ಉಳಿಸಿಕೊಳ್ಳುವ
ಸಾಮರ್ಥ್ಯವಿಲ್ಲ. ಹೀಗಾಗಿ, ದೊಡ್ಡಬಳ್ಳಾಪುರದಲ್ಲಿ ‘ಮುನೇಗೌಡಣ್ಣಾ ನೀನ್ ಮನೇಲಿರಣ್ಣ’ ಎಂದು ವ್ಯಂಗ್ಯ ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ಶಾಸಕ ಸ್ಥಾನದಲ್ಲಿರುವ ಟಿ.ವೆಂಕಟರಮಣಯ್ಯ ಸಾಮಾನ್ಯ ಕಾರ್ಯಕರ್ತರಂತೆ ಎಲ್ಲರಿಗೂ ಕೈಗೆಟುಕುತ್ತಾರೆ. ಯಾವುದೇ ಸಮಸ್ಯೆ ಎಂದರೂ ಸಹ ಸ್ಪಂದಿಸಿ, ಮನೆಮಗನಂತೆ ಅಭಿವೃದ್ಧಿಗೆ ಮುಂದಾಗುತ್ತಿದ್ದಾರೆ. ಆದರೆ, ದೊಡ್ಡಬಳಾಪುರದ ಬಿಜೆಪಿಯಲ್ಲಿ ಕೆಲವರು ಸ್ವಲ್ಪ ಅಧಿಕಾರ, ಹುದ್ದೆ ಸಿಕ್ಕರೂ ‘ನಾನೇ ನಾಯಕ’ ಎನ್ನುವಂತೆ ವರ್ತಿಸುತ್ತಿದ್ದಾರೆಂದು ಡಿಕೆಶಿ ಆರೋಪಿಸಿದರು.