ಬೆಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕೇರಳದ ವಯನಾಡ್ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಮತಬೇಟೆ ಕೈಗೊಳ್ಳಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈಕುರಿತು ಮಾಹಿತಿ ಹಂಚಿಕೊಂಡ ಶಿವಕುಮಾರ್, “ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಗುರುವಾರ ನಾನು ವಯನಾಡಿಗೆ ಹೋಗಿ ಪ್ರಚಾರ ಮಾಡಲಿದ್ದೇನೆ. ರಾಹುಲ್ ಗಾಂಧಿ ಅವರು ಯಾವುದಕ್ಕೂ ಹೆದರುವುದಿಲ್ಲ. ಅವರೊಬ್ಬ ಹೋರಾಟಗಾರ. ಅವರ ಪರಿಶ್ರಮ ಅವರಿಗೆ ತಕ್ಕ ಫಲ ನೀಡಲಿದೆ ಎಂಬ ವಿಶ್ವಾಸವಿದೆ” ಎಂದರು.
ಬಿಜೆಪಿ 140 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಅವರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಹೀಗಾಗಿ ಅವರು ಈ ರೀತಿ ಹೇಳಿದ್ದಾರೆ. ನಾನು ಕೂಡ ಎನ್ ಡಿಎ ಸರ್ಕಾರ ರಚಿಸುವುದಿಲ್ಲ, ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಅಪಾರ್ಟ್ ಮೆಂಟ್ ನಿವಾಸಿಗಳಿಗೆ ನೀವು ಬೆದರಿಕೆ ಹಾಕಿದ್ದೀರಿ ಎಂದು ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂಬ ಆರೋಪ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, “ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳಾಗಲಿ ಅಥವಾ ಬೇರೆಯವರ ಸಮಸ್ಯೆಗಳನ್ನು ನಿವಾರಣೆ ಮಾಡುವುದು ನನ್ನ ಕರ್ತವ್ಯ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮ ಪಕ್ಷದ ಗ್ಯಾರಂಟಿ ಮುಂದುವರಿಯುವುದಿಲ್ಲ ಎಂದು ಹೇಳುವ ಮೂಲಕ ಮತದಾರರನ್ನು ಬೆದರಿಸುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು 5 ವರ್ಷ ಇರಲಿದ್ದು, ಅದು ಮತ್ತೈದು ವರ್ಷ ಮುಂದುವರಿಯಲಿದೆ. ಈ ಸರ್ಕಾರ ಇರುವುದು 5 ವರ್ಷಕ್ಕಲ್ಲ, 10 ವರ್ಷಕ್ಕೆ. ಕೇಂದ್ರದಲ್ಲೂ ನಮ್ಮ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಅವರ ಸರ್ಕಾರ ಹೋಯಿತು, ಕೇಂದ್ರದಲ್ಲೂ ಅವರ ಸರ್ಕಾರ ಹೋಗಲಿದೆ ಎಂಬ ಹತಾಶೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಗ್ಯಾರಂಟಿ ಯೋಜನೆ ವಿಚಾರವಾಗಿ ವಿಜಯೇಂದ್ರ ಅವರು ಹೇಳಿರುವ ಹೇಳಿಕೆ ವಿರುದ್ಧ ನಾವು ಹೋರಾಟ ಮಾಡುತ್ತೇವೆ” ಎಂದರು.
ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದಿಂದ ಬಿಜೆಪಿಗೆ ಯಾವುದೇ ತೊಂದರೆ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ,, “ಕಳೆದ ಚುನಾವಣೆಯಲ್ಲಿ ಏನಾಯಿತು, ಶೋಭಾ ಕರಂದ್ಲಾಜೆ ಅವರ ಕ್ಷೇತ್ರದಲ್ಲಿ ಏನಾಯಿತು? ಅವರು ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲಲಿಲ್ಲ. ಅವರು ಚಿಕ್ಕಮಗಳೂರಿನಿಂದ ಜಾಗ ಖಾಲಿ ಮಾಡಿದ್ದು ಯಾಕೆ? ಅಲ್ಲಿನ ಜನರು ಶೋಭಕ್ಕಗೆ ಗೋ ಬ್ಯಾಕ್ ಎಂದರು” ಎಂದು ತಿಳಿಸಿದರು.