ಬೆಂಗಳೂರು: ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿವೆ. ಯುವಕರ ಧ್ವನಿ ಈ ದೇಶದ ಧ್ವನಿ. ಆದರೆ ಈ ಧ್ವನಿ ದಮನಕ್ಕೆ ಸರ್ಕಾರಗಳು ಮುಂದಾಗಿವೆ. ಯುವಕರು ತಮ್ಮ ಹಕ್ಕು ರಕ್ಷಣೆಗೆ ಹೋರಾಟ ಮಾಡಬೇಕಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ದಿಶಾ ರವಿ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ‘ದಿಶಾ ರವಿ ಅವರ ಬಂಧನದಿಂದ ಇಡೀ ದೇಶದ ಯುವ ಸಮುದಾಯ ದಿಗ್ಭ್ರಮೆಗೆ ಒಳಗಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಪ್ರಮುಖವಾದುದು. ನಮ್ಮ ಸಂವಿಧಾನ ನಮಗೆ ಈ ಸ್ವಾತಂತ್ರ್ಯ ನೀಡಿದೆ. ಯುವಕರು ತಮ್ಮ ಸ್ವಾತಂತ್ರ್ಯ ವ್ಯಕ್ತಪಡಿಸದಂತೆ ಬಾಯಿ ಮುಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ಇಡೀ ಯುವ ಸಮುದಾಯಕ್ಕೆ ಇದೊಂದು ಎಚ್ಚರಿಕೆ ಗಂಟೆ. ಎಲ್ಲರ ಅಭಿಪ್ರಾಯ, ಅನಿಸಿಕೆಗಳನ್ನು ಮಟ್ಟಹಾಕಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಬೇಕಿರುವುದು ಅನಿವಾರ್ಯ ಎಂದು ಡಿಕೆಶಿ ಹೇಳಿದರು.
ವಾಕ್ ಸ್ವಾತಂತ್ರ್ಯ ನಿಮ್ಮ ಹಕ್ಕು. ಭಾರತದಲ್ಲಿ ನಮ್ಮ ದೊಡ್ಡ ಆಸ್ತಿ ಎಂದರೆ ಅದು ನಮ್ಮ ಸ್ವಾತಂತ್ರ್ಯದ ಹಕ್ಕು. ಈ ಹಕ್ಕು ಉಳಿಸಿಕೊಳ್ಳಲು ನಾವು ಹೋರಾಟ ಮಾಡಬೇಕಿದೆ ಎಂದು ಯುವಕರಿಗೆ ಸಂದೇಶ ರವಾನಿಸುತ್ತೇನೆ. ರೈತರ ಹೋರಾಟ, ಸಿಎಎ, ಎನ್ಆರ್ಸಿ ವಿರೋಧದ ಧ್ವನಿ ಮೊಟುಕುಗೊಳಿಸಲಾಯಿತು. ಸರ್ಕಾರಕ್ಕೆ ನಾಯಕರುಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು, ಎನ್ಜಿಒ, ಮಾಧ್ಯಮಗಳು ಸೇರಿದಂತೆ ಯಾರು ಬೇಕಾದರೂ ಮಾರ್ಗದರ್ಶನ ನೀಡಬಹುದು. ಇವರ ಬಾಯನ್ನು ಮುಚ್ಚಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಎಲ್ಲ ಯುವಕರು ಎದ್ದೇಳಬೇಕು, ಮಾಧ್ಯಮ ಸ್ನೇಹಿತರು ಕೂಡ ನಿಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.